Shubhashaya News

ಐಪಿಆರ್ ಘಟಕ ಸ್ಥಾಪನೆ, ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್‌ಗೆ ಚಾಲನೆ

ಶರಣಬಸವ ವಿಶ್ವವಿದ್ಯಾಲಯ, ಕೆಎಸ್‌ಸಿಎಸ್‌ಟಿ ಹಾಗೂ ಸಮಾಧಾನ ಕೌನ್ಸೆಲಿಂಗ್ ಸೆಂಟರ್ ನಡುವೆ ಮಹತ್ವದ ಒಡಂಬಡಿಕೆ

ಕಲಬುರಗಿ: ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಶ್ರೇಷ್ಠತೆಯನ್ನು ಹೆಚ್ಚಿಸುವುದು ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಹಾಗೂ ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್‌ನೊಂದಿಗೆ ಎರಡು ಮಹತ್ವದ ತಿಳಿವಳಿಕೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ.

ಕೆಎಸ್‌ಸಿಎಸ್‌ಟಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆಗೆ ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಅಶೋಕ ಎಂ. ರಾಯಚೂರ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಸಹಿ ಹಾಕಿದರು.

ಒಡಂಬಡಿಕೆಯನ್ವಯ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಘಟಕವನ್ನು ಸ್ಥಾಪಿಸಲಾಗುವುದು. ಐಪಿಆರ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಎಸ್‌ಸಿಎಸ್‌ಟಿ ತಾಂತ್ರಿಕ ನೆರವು ನೀಡುವುದರ ಜೊತೆಗೆ ಜಂಟಿ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಆಯೋಜಿಸಲು ಸಹಕರಿಸಲಿದೆ. ವಿಶ್ವವಿದ್ಯಾಲಯದಲ್ಲಿ ಸಮಗ್ರ ಐಪಿಆರ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಅಗತ್ಯ ಮಾರ್ಗದರ್ಶನ ಮತ್ತು ನೆರವನ್ನು ಸಹ ಒದಗಿಸಲಿದೆ.

ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ರಕ್ಷಿಸುವುದು, ಉತ್ತೇಜಿಸುವುದು ಹಾಗೂ ವಿಸ್ತರಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಸಹಕಾರದಿಂದ ಕಾರ್ಯನಿರ್ವಹಿಸಲಿವೆ. ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಸಂಭಾವ್ಯ ಬೌದ್ಧಿಕ ಆಸ್ತಿ ಮತ್ತು ನವೀನ ಆವಿಷ್ಕಾರಗಳನ್ನು ಗುರುತಿಸಿ, ಅವುಗಳನ್ನು ನೋಂದಾಯಿಸುವ ಹಾಗೂ ವಾಣಿಜ್ಯೀಕರಣಗೊಳಿಸುವ ಪ್ರಕ್ರಿಯೆಗೆ ಕೆಎಸ್‌ಸಿಎಸ್‌ಟಿ ತಾಂತ್ರಿಕ ನೆರವು ನೀಡಲಿದೆ.

ಐಪಿಆರ್ ಘಟಕವು ವಿಶ್ವವಿದ್ಯಾಲಯ ಮತ್ತು ಕೆಎಸ್‌ಸಿಎಸ್‌ಟಿ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ಹೊಂದಿರಲಿದೆ. ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು, ಕಾಲಕಾಲಕ್ಕೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು ಹಾಗೂ ನವೀನ ಆವಿಷ್ಕಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಘಟಕದ ಪ್ರಮುಖ ಕಾರ್ಯಗಳಾಗಿವೆ.

೫೦ ಗಂಟೆಗಳ ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್

ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ನಡುವೆ ಮತ್ತೊಂದು ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಪರವಾಗಿ ಖ್ಯಾತ ಮನೋವಿಜ್ಞಾನಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಮತ್ತು ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಡಂಬಡಿಕೆಯನ್ವಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ೫೦ ಗಂಟೆಗಳ ಅವಧಿಯ ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್ ಆರಂಭಿಸಲಾಗುವುದು.

ಸಮಾಧಾನ ಕೌನ್ಸೆಲಿಂಗ್ ಸೆಂಟರ್‌ನ ಮನೋವೈದ್ಯರು, ಮನೋವಿಜ್ಞಾನಿಗಳು, ಥೆರಪಿಸ್ಟ್‌ಗಳು ಹಾಗೂ ಪ್ರಮಾಣೀಕೃತ ಕೌನ್ಸೆಲರ್‌ಗಳ ತಜ್ಞರ ಜಾಲದ ಸಹಕಾರದೊಂದಿಗೆ ವಿದ್ಯಾರ್ಥಿಗಳು ಮತ್ತು ಸಮುದಾಯದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮರ್ಥರಾದ ತರಬೇತಿಪಡಿಸಿದ ಕೌನ್ಸೆಲರ್‌ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ತರಬೇತಿ ಪಡೆದ ಕೌನ್ಸೆಲರ್‌ಗಳು ಶಾಲೆಗಳು, ಕಾಲೇಜುಗಳು ಹಾಗೂ ಸಮಾಜದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಕೌಶಲ್ಯಗಳನ್ನು ಪಡೆಯಲಿದ್ದಾರೆ.

ಕೋರ್ಸ್ ಅನ್ನು ಹೈಬ್ರಿಡ್/ಫಿಜಿಟಲ್ ಮಾದರಿಯಲ್ಲಿ ನಡೆಸಲಾಗುವುದು. ನೇರ ಸಂವಾದಾತ್ಮಕ ಮತ್ತು ಮೇಲ್ವಿಚಾರಣೆಯ ಆನ್‌ಲೈನ್ ತರಗತಿಗಳು, ಡಿಜಿಟಲ್ ಕಲಿಕಾ ಘಟಕಗಳು ಹಾಗೂ ಪ್ರಾಯೋಗಿಕ ಮತ್ತು ಭೌತಿಕ ಕಾರ್ಯಾಗಾರಗಳ ಸಮನ್ವಯದೊಂದಿಗೆ ತರಬೇತಿ ನೀಡಲಾಗುವುದು. ಸಮಾಧಾನ ಕೌನ್ಸೆಲಿಂಗ್ ಸೆಂಟರ್ ವಿಶೇಷ ಹಾಗೂ ಸಮಗ್ರ ಪಠ್ಯಕ್ರಮ ರೂಪಿಸಲಿದ್ದು, ಕೇಂದ್ರದ ವಿಷಯ ತಜ್ಞರು ತರಗತಿಗಳನ್ನು ನಡೆಸಲಿದ್ದಾರೆ.

ಕೋರ್ಸ್‌ಗೆ ಸೇರ್ಪಡೆಯಾಗಲು ಕನಿಷ್ಠ ೨೦ ವರ್ಷ ವಯಸ್ಸು ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು.

ಎರಡೂ ಒಡಂಬಡಿಕೆಗಳ ಸಹಿ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಡೀನ್ ಡಾ. ಶಿವಕುಮಾರ ಜವಳಿಗಿ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave A Reply

Your email address will not be published.