Shubhashaya News

18.49 ಲಕ್ಷ ಕರಡು ಮತದಾರಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್

1.05 ಲಕ್ಷ ಅನ್ ಮ್ಯಾಪಿಂಗ್,

ಕಲಬುರಗಿ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR)-2026ರ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 18,49,585 ಮತದಾರರು ಕರಡು ಪಟ್ಟಿಯನ್ನು ಪ್ರಚುರ ಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಇರಲಿದೆ. ಈ ಅವಧಿಯಲ್ಲಿ ಅರ್ಹ ಮತದಾರರು ತಮ್ಮ ಹೆಸರು, ವಿಳಾಸ, ವಯಸ್ಸು, ಮತಗಟ್ಟೆ ಸೇರಿದಂತೆ ಇತರೆ ವಿವರಗಳನ್ನು ಪರಿಶೀಲಿಸಬೇಕು. ಅರ್ಹ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಅಥವಾ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಸಂಬಂಧಪಟ್ಟ ERO/AERO ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಜಿಲ್ಲೆಯ ಕರಡು ಪಟ್ಟಿಯಲ್ಲಿ 9,40,251 ಪುರುಷರು, 9,09,121 ಮಹಿಳೆಯರು ಹಾಗೂ 213 ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 18,49,585 ಮತದಾರರಿದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 2,29,997 ಮತದಾರರಿದ್ದರೆ, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 2,21,513, ಜೇವರ್ಗಿಯಲ್ಲಿ 2,15,846, ಆಳಂದದಲ್ಲಿ 2,05,852, ಅಫಜಲಪುರದಲ್ಲಿ 2,04,401 ಮತದಾರರಿದ್ದಾರೆ.

5.21 ಲಕ್ಷ ಮತದಾರರು ASDD ಪಟ್ಟಿಯಲ್ಲಿ

SIR ಪ್ರಕ್ರಿಯೆಯಲ್ಲಿ ಗುರುತಿಸಲಾದ ASDD (Absent, Shifted, Dead, Duplicate/Already Enrolled ಹಾಗೂ ಇತರೆ ವರ್ಗಗಳು) ಅಡಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 5,21,957 ಮತದಾರರನ್ನು ಗುರುತಿಸಲಾಗಿದೆ. ಇದು ಜಿಲ್ಲೆಯ ಒಟ್ಟು ಮತದಾರರ ಪೈಕಿ 22.01ರಷ್ಟು ಆಗಿದೆ.

ಅದರಂತೆ, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 1,01,263 ಹಾಗೂ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 1,05,257 ಮತದಾರರು ASDD ಪಟ್ಟಿಯಲ್ಲಿದ್ದಾರೆ. ಚಿತ್ತಾಪುರದಲ್ಲಿ 55,500, ಕಲಬುರಗಿ ಗ್ರಾಮೀಣದಲ್ಲಿ 53,365, ಆಳಂದದಲ್ಲಿ 49,214, ಜೇವರ್ಗಿಯಲ್ಲಿ 43,215, ಸೇಡಂನಲ್ಲಿ 41,491, ಅಫಜಲಪುರದಲ್ಲಿ 38,925 ಮತ್ತು ಚಿಂಚೋಳಿಯಲ್ಲಿ 33,727 ಮತದಾರರನ್ನು ASDD ವರ್ಗದಲ್ಲಿ ಗುರುತಿಸಲಾಗಿದೆ.

ASDD ಪಟ್ಟಿಯಲ್ಲಿ 3,47,606 ಮಂದಿ ಗೈರು (Absent), 71,691 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 33,399 ಮಂದಿ ಮೃತರು ಹಾಗೂ 21,816 ಮಂದಿ ಈಗಾಗಲೇ ನೋಂದಣಿಯಾಗಿರುವ/ನಕಲಿ ನೋಂದಣಿ ಸೇರಿದಂತೆ ಇತರೆ ವರ್ಗಗಳಲ್ಲಿ ಗುರುತಿಸಲಾಗಿದೆ.

1.05 ಲಕ್ಷ ಮ್ಯಾಪಿಂಗ್/ಅಸಂಗತತೆ ಪ್ರಕರಣ

SIR ಕರಡು ಪಟ್ಟಿಯಲ್ಲಿ ಒಟ್ಟು 1,05,493 ಮ್ಯಾಪಿಂಗ್ ಇಲ್ಲದ ಅಥವಾ ಅಸಂಗತತೆ (Anomalies) ಇರುವ ಪ್ರಕರಣಗಳು ಗುರುತಿಸಲ್ಪಟ್ಟಿವೆ. ಇದರಲ್ಲಿ 53,788 ಪ್ರಕರಣಗಳಲ್ಲಿ ಮ್ಯಾಪಿಂಗ್ ಇಲ್ಲದಿರುವುದು ಹಾಗೂ 51,705 ಪ್ರಕರಣಗಳಲ್ಲಿ ಅಸಂಗತತೆ ಕಂಡುಬಂದಿದೆ. ಕಲಬುರಗಿ ದಕ್ಷಿಣದಲ್ಲಿ 31,081 ಹಾಗೂ ಕಲಬುರಗಿ ಉತ್ತರದಲ್ಲಿ 25,866 ಪ್ರಕರಣಗಳು ದಾಖಲಾಗಿವೆ.

ಅಕ್ಟೋಬರ್ 27ರಂದು ಅಂತಿಮ ಪಟ್ಟಿ

SIR ಪರಿಷ್ಕರಣೆಯ ವೇಳಾಪಟ್ಟಿಯಂತೆ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ನೋಟಿಸ್ ಹಂತ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅಕ್ಟೋಬರ್ 22ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27, 2026ರಂದು ಪ್ರಕಟವಾಗಲಿದೆ.

ಜಿಲ್ಲೆಯ ಪ್ರತಿಯೊಬ್ಬ ಮತದಾರರೂ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ, ಯಾವುದೇ ತಪ್ಪು ಅಥವಾ ಲೋಪ ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.

ಬಿಎಲ್‌ಒಗಳ ಮೂಲಕ ಮನೆಗೆ ನೋಟಿಸ್‌:
ಮತದಾರರ ನೋಂದಣಾಧಿಕಾರಿ ಜಾರಿಗೊಳಿಸುವ ನೋಟಿಸ್‌ನಲ್ಲಿ ಯಾವ ಕಾರಣಕ್ಕಾಗಿ ನೋಟಿಸ್‌ ನೀಡಲಾಗುತ್ತಿದೆ, ಯಾವ ದಾಖಲೆಗಳನ್ನು ಹಾಜರು ಪಡಿಸಬೇಕು, ವಿಚಾರಣೆಯ ದಿನಾಂಕ, ಸ್ಥಳ ಹಾಗೂ ಸಮಯವನ್ನು ಮುದ್ರಿಸಲಾಗಿರುತ್ತದೆ. ಬಿಎಲ್‌ಒ ಗಳು ನೋಟಿಸ್‌ ಅನ್ನು ಮತದಾರರ ಮನೆಗೆ ಬಂದು ನೀಡುತ್ತಾರೆ. ಒಂದು ವೇಳೆ ಬಿಎಲ್‌ಒ ಮನೆಗೆ ಬರುವ ಸಂದರ್ಭದಲ್ಲಿ ಮತದಾರರು ಲಭ್ಯವಿಲ್ಲದೆ ಹೋದರೆ, ಮತದಾರರು ಸೂಚಿಸುವಂತಹ ವ್ಯಕ್ತಿಗೆ ನೋಟಿಸ್ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.

ಕನಿಷ್ಠ 7 ದಿನ ಕಾಲಾವಕಾಶ:
ನೋಟಿಸ್‌ ನೀಡಿದ ಬಳಿಕ ಮತದಾರರಿಗೆ ಕನಿಷ್ಠ 7 ದಿನಗಳ ಕಾಲಾವಕಾಶ ನೀಡಬೇಕು. ಒಂದು ವೇಳೆ ಮತದಾರರ ನೋಂದಣಾಧಿಕಾರಿ ನೋಟಿಸ್ ನಲ್ಲಿ ತಿಳಿಸಿರುವ ದಿನಾಂಕದಂದು ಹಾಜರಾಗಲು ಮತದಾರರಿಗೆ ಸಾಧ್ಯವಾಗದೆ ಇದ್ದಲ್ಲಿ ಒಮ್ಮೆ ಮಾತ್ರ ಕಾಲಾವಕಾಶ ಪಡೆಯಲು ಅವಕಾಶವಿರುತ್ತದೆ. ಮತದಾರರ ನೋಂದಣಾಧಿಕಾರಿ ಎದುರು ಸಂಬಂಧಪಟ್ಟ ಮತದಾರರು ಖುದ್ದು ಹಾಜರಾಗಬೇಕು. ನಿಗದಿ ಪಡೆಸಿರುವ ದಾಖಲೆಗಳು ನೀಡಬೇಕು ಎಂದು ತಿಳಿಸಿದರು.

 

ಹಕ್ಕು–ಆಕ್ಷೇಪಣೆಗೆ ಸೆ.23ರವರೆಗೆ ಅವಕಾಶ:
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಅಥವಾ ಯಾವುದೇ ಕಾರಣದಿಂದ ಹೆಸರು ಕಾಣಿಸದಿರುವ ಅರ್ಹ ಮತದಾರರು ಆತಂಕಪಡಬೇಕಾಗಿಲ್ಲ. ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಅರ್ಹರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರು ಮರುಸೇರ್ಪಡೆಗೆ ಕ್ರಮ ಕೈಗೊಳ್ಳಬಹುದು. ವಿಶೇಷವಾಗಿ ಮತದಾರರು ತಮ್ಮ ಹೆಸರು ಕರಡು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಹೆಸರು ಇಲ್ಲದಿದ್ದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಮರುಸೇರ್ಪಡೆಗೆ ಅವಕಾಶವಿದೆ. ಫಾರಂ–6 ಹಾಗೂ ಫಾರಂ–8 ಮೂಲಕ ಅಗತ್ಯ ಅರ್ಜಿಗಳನ್ನು ಸಲ್ಲಿಸಬಹುದು.

– ಇಕ್ರಮ್ ಶರೀಫ್, ಜಿಲ್ಲಾಧಿಕಾರಿ ಕಲಬುರಗಿ

Leave A Reply

Your email address will not be published.