Shubhashaya News

ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ: ಪ್ರಮೋದ್ ಭೋವಿ ಖಂಡನೆ

ಅಫಜಲಪುರ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗಂಗಾಜಲ ಬಳಸಿ ಶುದ್ಧೀಕರಣ ಮಾಡಿರುವ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮವನ್ನು ಯುವ ಮುಖಂಡ ಹಾಗೂ ಸಿದ್ದರಾಮೇಶ್ವರ ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪ್ರಮೋದ್ ಭೋವಿ ತೀವ್ರವಾಗಿ ಖಂಡಿಸಿದ್ದಾರೆ.

ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿ ಭಾಷಣ ಮಾಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗಂಗಾಜಲ ಬಳಸಿ ಶುದ್ಧೀಕರಣ ಮಾಡಿದ್ದಾರೆ ಎನ್ನಲಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಘಟನೆಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಮೋದ್ ಭೋವಿ, “ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಒಬ್ಬ ಹಿರಿಯ ರಾಜಕೀಯ ನಾಯಕರು ಭಾಷಣ ಮಾಡಿದ ಸ್ಥಳವನ್ನು ಅವರು ಬಳಸಿದ ಕಾರಣಕ್ಕೆ ಶುದ್ಧೀಕರಣ ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ. ಇಂತಹ ಕ್ರಮವು ದಲಿತ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಅಸ್ಪೃಶ್ಯತೆಯ ನೋವನ್ನು ಮತ್ತೆ ನೆನಪಿಸುವಂತಾಗಿದೆ” ಎಂದು ಆಕ್ಷೇಪಿಸಿದ್ದಾರೆ.
ಘಟನೆ ಕುರಿತು ಖರ್ಗೆ ಅವರೂ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇಂತಹ ನಡೆ ದಲಿತರನ್ನು ಅವಮಾನಿಸುವ ಹಾಗೂ ಸಮಾಜದಲ್ಲಿ ಅಸ್ಪೃಶ್ಯತೆಯ ಮನೋಭಾವವನ್ನು ಉತ್ತೇಜಿಸುವಂತಿದೆ ಎಂದು ಆಕ್ಷೇಪಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದ್ದರೂ, ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯನ್ನು ಆಧರಿಸಿ ವ್ಯಕ್ತಿಯೊಬ್ಬರ ಉಪಸ್ಥಿತಿಯ ಸ್ಥಳವನ್ನು ಶುದ್ಧೀಕರಿಸುವಂತಹ ಘಟನೆಗಳು ಸಮಾಜದಲ್ಲಿ ಅಸಹಿಷ್ಣುತೆ ಮತ್ತು ದ್ವೇಷದ ವಾತಾವರಣಕ್ಕೆ ಕಾರಣವಾಗಬಹುದು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.