ಕಸಾಯಿಖಾನೆಯಲ್ಲಿ ಗೋಮಾಂಸ ಪತ್ತೆ; ಅಪರಿಚಿತರ ವಿರುದ್ಧ ಪ್ರಕರಣ
ಆಳಂದ: ಪಟ್ಟಣದ ೨೦ನೇ ವಾರ್ಡ್ನ ದಾರುಲ್ ಹಿಂದ್ ಹಿಂಭಾಗದಲ್ಲಿರುವ ಖುರೇಷಿ ಸಮಾಜದ ಜಾಗದಲ್ಲಿನ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು ₹೩೫ ಸಾವಿರ ಮೌಲ್ಯದ ಮಾಂಸ ಹಾಗೂ ದನದ ಕಾಲು, ತಲೆ ಮತ್ತು ಚರ್ಮದ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಳಂದ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆ. ೨೨ರಂದು ಬೆಳಿಗ್ಗೆ ಪಟ್ಟಣದ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಲು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ೨೦ನೇ ವಾರ್ಡ್ಗೆ ತೆರಳಿದ್ದರು. ಬೆಳಿಗ್ಗೆ ೧೧ರ ಸುಮಾರಿಗೆ ದಾರುಲ್ ಹಿಂದ್ ಹಿಂಭಾಗದಲ್ಲಿರುವ ಖುರೇಷಿ ಸಮಾಜದ ಜಾಗದ ಬಳಿಗೆ ತೆರಳಿದಾಗ ಕಸಾಯಿಖಾನೆ ಆವರಣದಿಂದ ತೀವ್ರ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳು ಕಸಾಯಿಖಾನೆ ಆವರಣದೊಳಗೆ ತೆರಳುತ್ತಿದ್ದಂತೆ ಅಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಸ್ಥಳ ಪರಿಶೀಲನೆ ನಡೆಸಿದಾಗ ನಾಲ್ಕು ಕಟ್ಟೆಗಳ ಮಧ್ಯೆ ಕತ್ತರಿಸಿದ ಮಾಂಸದ ತುಂಡುಗಳು ಪತ್ತೆಯಾಗಿದ್ದು, ಅವುಗಳ ಅಂದಾಜು ಮೌಲ್ಯ ೩೫ ಸಾವಿರ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಜತೆಗೆ ದನದ ಕಾಲು, ತಲೆ ಹಾಗೂ ಚರ್ಮದ ಅವಶೇಷಗಳು ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಗೋಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ತೀವ್ರ ದುರ್ವಾಸನೆ ಕಂಡುಬAದ ಹಿನ್ನೆಲೆಯಲ್ಲಿ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರು ಪರಿಶೀಲನೆ ನಡೆಸಿದ್ದು, ದುರ್ವಾಸನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಘಟನೆ ಕುರಿತು ಮಾಹಿತಿ ಪಡೆದ ರಾಷ್ಟç ರಕ್ಷಣಾ ಪಡೆ ಬೆಂಗಳೂರು ಜಿಲ್ಲಾಧ್ಯಕ್ಷ ಡಾ. ನಾಗೇಂದ್ರ ಶಿರೂರ ಅವರು ಸ್ಥಳಕ್ಕೆ ತೆರಳಿ ೧೧೨ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಅವರೊಂದಿಗೆ ಕಸಾಯಿಖಾನೆ ಪರಿಶೀಲಿಸಿ, ಅಕ್ರಮ ಗೋಹತ್ಯೆ ನಡೆದಿದ್ದರೆ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ದೂರು ನೀಡಿ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಖುರೇಷಿ ಗಲ್ಲಿಯಲ್ಲಿ ಕೆಲಕಾಲ ಜನಜಂಗುಳಿ ಸೇರಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೧೫೫/೨೦೨೬ ದಾಖಲಾಗಿದೆ. ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ-೨೦೨೦ರ ಕಲಂ ೪, ೫, ೭, ೮ ಹಾಗೂ ೧೨ರ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಯಾರು ಮಾಂಸ ಸಂಗ್ರಹಿಸಿದ್ದರು, ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿತ್ತೇ ಹಾಗೂ ಘಟನೆಗೆ ಸಂಬAಧಿಸಿದವರು ಯಾರು ಎಂಬುದರ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.