Shubhashaya News

ಸಚಿವ ಬಿ.ನಾಗೇಂದ್ರ ಅವರಿಗೆ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗಿದೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಕಲಬುರಗಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ನಾಗೇಂದ್ರ ಅವರನ್ನು ರಾಜಕೀಯ ಕಾರಣಕ್ಕಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಇ.ಡಿ. ಮತ್ತು ಸಿಬಿಐ ಕೂಡ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತವೆ. ವಾಲ್ಮೀಕಿ ಹಗರಣದ ಕುರಿತು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸಿತ್ತು. ಎಸ್‌ಐಟಿ ತನಿಖೆಯಲ್ಲಿ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ಹೀಗಾಗಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು.

ವಾಲ್ಮೀಕಿ ಹಗರಣದ ತನಿಖೆ ಈಗಾಗಲೇ ನಡೆದಿದೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸರ್ಕಾರ ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ನಾಗೇಂದ್ರ ಅವರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ ಉತ್ತರ ನೀಡಲಿದೆ. ಸಚಿವರ ಪರವಾಗಿ ಪಕ್ಷ ನಿಲ್ಲುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಂತ್ರಿಮಂಡಲ ರಚನೆಗೆ ₹2 ಸಾವಿರ ಕೋಟಿ ಕಲೆಕ್ಷನ್ ಆಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಮೊದಲು ಯತ್ನಾಳ್ ಅವರು ತಮ್ಮ ಆರೋಪಕ್ಕೆ ಸಾಕ್ಷ್ಯಾಧಾರ ನೀಡಲಿ ಎಂದು ಒತ್ತಾಯ ಮಾಡಿದರು.

ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಿಂದೆ ಮುಖ್ಯಮಂತ್ರಿ ಆಗಲು 2,500 ಕೋಟಿ ಹಣ ಕೇಳುತ್ತಾರೆ ಎಂದು ಯತ್ನಾಳ್ ಆರೋಪಿಸಿದ್ದರು. ಹಾಗಾದರೆ ಆ ಆರೋಪವೂ ನಿಜವೇ ಎಂದು ಪ್ರಶ್ನಿಸಿದ ಅವರು, ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದರು.

ವಂದೇ ಮಾತರಂ ವಿವಾದಕ್ಕೆ ಯತೀಂದ್ರ ತಿರುಗೇಟು

ವಂದೇ ಮಾತರಂ ಗೀತೆಯ ಆರು ಪ್ಯಾರಾ ಹಾಡಿಸುವ ವಿಚಾರವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮುನ್ನೆಲೆಗೆ ತರುತ್ತಿದೆ. ಆರು ಸ್ತಬಕ ಮಾಡಿಸುವುದರಿಂದ ಏನು ಸಾಧಿಸಿದಂತಾಗುತ್ತದೆ ಎಂದು ಪ್ರಶ್ನಿಸಿದ ಸಚಿವ ಯತೀಂದ್ರ ಅವರು, ಸ್ವಾತಂತ್ರ್ಯ ಹೋರಾಟಗಾರರು ತೆಗೆದುಕೊಂಡ ನಿರ್ಧಾರಕ್ಕಿಂತ ಬಿಜೆಪಿಯವರ ನಿರ್ಧಾರವೇ ದೊಡ್ಡದಾ? ಎಂದು ಮರುಪ್ರಶ್ನೆ ಮಾಡಿದರು.

Leave A Reply

Your email address will not be published.