Shubhashaya News

ಆ. 30ರಂದು ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನ; ಸಮ್ಮೇಳನಾಧ್ಯಕ್ಷರಾಗಿ ನೆಲೋಗಿಯ ಸಿದ್ಧಲಿಂಗ ಶ್ರೀ ಆಯ್ಕೆ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಆ. 30ರಂದು ನಡೆಯಲಿರುವ ಒಂದು ದಿನದ ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಸಮ್ಮೇಳನವನ್ನು ಅರ್ಥಪೂರ್ಣವಾಗಿ ರೂಪಿಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವ ತತ್ವ ಪ್ರಸಾರಕ್ಕೆ ನಿರಂತರ ಸೇವೆ

ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಅದರ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ನೆಲೋಗಿಯಲ್ಲಿ ಪೂರ್ಣಗೊಳಿಸಿದ ಅವರು, ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಸಂಸ್ಕೃತ ಹಾಗೂ ಯೋಗ ಶಿಕ್ಷಣ ಪಡೆದು, ಕಾಲೇಜು ಶಿಕ್ಷಣವನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಪೂರ್ಣಗೊಳಿಸಿದ್ದಾರೆ.

ಶಿಕ್ಷಣ ಹಾಗೂ ದಾಸೋಹ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಶ್ರೀಗಳು, 150ಕ್ಕೂ ಹೆಚ್ಚು ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ದಾಸೋಹ ಪರಂಪರೆಯನ್ನು ಮುಂದುವರಿಸಿದ್ದಾರೆ. ಶಿಕ್ಷಣ ಸೇವೆಯ ಜತೆಗೆ ಬಸವಾದಿ ಶರಣರ ವಚನಗಳು ಹಾಗೂ ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ನಾಡಿನಾದ್ಯಂತ ನೂರಾರು ಪ್ರವಚನಗಳನ್ನು ನಡೆಸಿ ವಚನ ಜಾಗೃತಿಗೆ ಶ್ರಮಿಸಿದ್ದಾರೆ.

ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಬಸವ ತತ್ವದ ಪ್ರತಿಪಾದಕರಾಗಿ ಹಾಗೂ ಕ್ರಾಂತಿಕಾರಕ ವೈಚಾರಿಕ ನಿಲುವಿನ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ಸತ್ಯದ ನಿಲುವುಗಳಿಗೆ ಬದ್ಧರಾಗಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹರಿಹರ ಪೀಠಾಧ್ಯಕ್ಷರಾಗಿಯೂ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ.

Leave A Reply

Your email address will not be published.