Shubhashaya News

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ

ಸರ್ಕಾರಕ್ಕೆ 13 ಮಹತ್ವದ ನಿರ್ಣಯಗಳ ಶಿಫಾರಸು:

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಹಾಗೂ ಸಮತೋಲ ಅಭಿವೃದ್ಧಿಗೆ ಸರ್ಕಾರವು 5ರಿಂದ 10 ವರ್ಷಗಳ ದೂರದೃಷ್ಟಿಯೊಂದಿಗೆ ಕಾಲಮಿತಿಯ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಮಹತ್ವದ ದುಂಡುಮೇಜಿನ ಸಭೆ ಆಗ್ರಹಿಸಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಪರಿಣಿತ ತಜ್ಞರು, ಚಿಂತಕರು, ಬುದ್ಧಿಜೀವಿಗಳು, ಅಭಿವೃದ್ಧಿಪರ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದ ಸಭೆ ಶುಕ್ರವಾರ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕಚೇರಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ನಂಜುಂಡಪ್ಪ ವರದಿಯ ಮಾನದಂಡಗಳು ಹಾಗೂ ಸೂಚ್ಯಂಕಗಳು ಮತ್ತು ಪ್ರಸ್ತುತ ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯಲ್ಲಿನ ಅಭಿವೃದ್ಧಿ ಸೂಚ್ಯಂಕಗಳು ಹಾಗೂ ಶಿಫಾರಸುಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಏಳು ಜಿಲ್ಲೆಗಳ ತಜ್ಞರು ತಮ್ಮ ಕ್ಷೇತ್ರವಾರು ಅನುಭವ ಹಾಗೂ ಸಲಹೆಗಳನ್ನು ಮಂಡಿಸಿದರು.

ರಾಯಚೂರಿನ ಅಭಿವೃದ್ಧಿಪರ ಹೋರಾಟಗಾರ ಡಾ. ರಜಾಕ್ ಉಸ್ತಾದ್ ಮಾತನಾಡಿ, ಗೋವಿಂದರಾವ್ ಸಮಿತಿಯ ವರದಿಯಲ್ಲಿ ಸ್ಪಷ್ಟತೆಯ ಕೊರತೆಯಿದ್ದು, ಅದರ ಆಧಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ದ್ವಂದ್ವ ಉಂಟಾಗುತ್ತಿದೆ. 172 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ₹42 ಸಾವಿರ ಕೋಟಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸ್ಪಷ್ಟ ಮಾನದಂಡಗಳನ್ನು ರೂಪಿಸಿ, ಕಾಲಮಿತಿಯ ವೈಜ್ಞಾನಿಕ ಕ್ರಿಯಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಯಚೂರಿನ ಏಮ್ಸ್ ಹೋರಾಟ ಸಮಿತಿ ಅಧ್ಯಕ್ಷ ಡಾ. ಬಸವರಾಜ ಕಳಸಾ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲ ನಾಯಕರು ಹಾಗೂ ಅಭಿವೃದ್ಧಿಪರ ಸಂಘಟನೆಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ತರಬೇಕು. ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ದೂರದೃಷ್ಟಿಯ ಗಡುವಿನ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಿಕ್ಷಣ ತಜ್ಞ ಪ್ರೊ. ಧನರಾಜ ಮಾತನಾಡಿ, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕೆಳಹಂತದಿಂದಲೇ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ. ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ ರೂಪಿಸುವುದರ ಜತೆಗೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದರು.

ವಿಶ್ರಾಂತ ಕುಲಪತಿ ಪ್ರೊ. ಪ್ರತಾಪಸಿಂಗ್ ತಿವಾರಿ, ಪ್ರೊ. ಬಸವರಾಜ ಕುಮನೂರ, ಪ್ರೊ. ಆರ್.ಕೆ. ಹುಡಗಿ, ಚೇಂಬರ್ಸ್ ಆಫ್ ಕಾಮರ್ಸ್ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಡಾ. ಸನಾವುಲ್ಲಾ, ಡಾ. ನಿರ್ಮಲಾ ಸಜ್ಜನ, ಬೀದರಿನ ಕಾರಂಜಾ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಡಾ. ಮಾಜಿದ್ ದಾಗಿ, ಡಾ. ಬಿ.ಎಸ್. ಗುಲಶೆಟ್ಟಿ, ಶಿವಾನಂದ ಪಾಟೀಲ್, ರಾಯಚೂರಿನ ಅಮರೇಗೌಡ ಪಾಟೀಲ್, ವಿನಯ ಚಿತ್ರಗಾರ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಮೀನಾಕ್ಷಿ ಬಾಳಿ, ಕೆ. ನೀಲಾ, ಡಾ. ಸದಾನಂದ ಪೆರ್ಲಾ, ಡಾ. ಗಾಂಧೀಜಿ ಮೋಳಕೇರೆ, ಡಾ. ಮಲ್ಲಿಕಾರ್ಜುನ ಶೆಟ್ಟಿ, ಸೈಯದ್ ರೌಫ್ ಖಾದ್ರಿ, ಮಲ್ಲಿಕಾರ್ಜುನ ಬಿ., ಅಬ್ದುಲ್ ರಹೀಂ, ಮೋಹನ ಕಟ್ಟಿಮನಿ, ಬಸವರಾಜ ಕಲ್ಯಾಣಿ, ಎಸ್.ಎಸ್. ಪಾಟೀಲ್, ರಾಜಪ್ಪ ಕಮಲಪುರ, ಡಾ. ರಾಜಶೇಖರ, ಡಾ. ಆರ್. ವೆಂಕಟರೆಡ್ಡಿ, ಪಿಡ್ಡಪ್ಪ ಜಾಲಗಾರ, ಸೇರಿದಂತೆ ನೂರಾರು ಪರಿಣಿತರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವರಾಜ ದೇಶಮುಖ ಅವರ ಅನುಮೋದನಾ ಭಾಷಣಕ್ಕೆ ಪೂರಕವಾಗಿ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ಅವರು ಸಭೆಯ ಮುಂದೆ ನಿರ್ಣಯಗಳನ್ನು ಮಂಡಿಸಿದರು. ಸಭೆಯಲ್ಲಿ ಒಟ್ಟು 13 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ದುಂಡುಮೇಜಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳು :
1. 5-10 ವರ್ಷದ ದೂರದೃಷ್ಟಿಕೋನದಲ್ಲಿ ವೈಜ್ಞಾನಿಕ ಕ್ರೀಯಾಯೋಜನೆ ರೂಪಿಸಬೇಕು.
2. ಕೆಕೆಆರ್ ಡಿಬಿಯಿಂದ ನಿರ್ಲಕ್ಷಕ್ಕೊಳಗಾದ ಕ್ಷೇತ್ರ ಮತ್ತು ಗ್ರಾಮ, ತಾಲ್ಲೂಕುಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಬೇಕು. ಪ್ರಗತಿಗೆ ಕಾರ್ಯಾಚರಣೆಯ ರೂಪದ ಪ್ರಗತಿಗೆ ಕ್ರಮ ಕೈಗೊಳ್ಳಬೇಕು.
3. ಮುಖ್ಯಮಂತ್ರಿ ಗಳಿಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಪರ ನಿಯೋಗ ಭೇಟಿ ಮಾಡಲು ನಿರ್ಧರಿಸಲಾಯಿತು.
4. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಕೃಷಿ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಯೋಜನೆ ರೂಪಿಸಬೇಕು.
5. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಮತ್ತು ಪ್ರತ್ಯೇಕ ಕೃಷಿ ನೀತಿ ಹಾಗೂ ಶೈಕ್ಷಣಿಕ ನೀತಿಯನ್ನು ರೂಪಿಸಬೇಕು.
6. ರಾಯಚೂರಿನಲ್ಲಿ ನಡೆದಿರುವ ಏಮ್ಸ್ ಬೇಡಿಕೆಯ ಹೋರಾಟಕ್ಕೆ ಬೆಂಬಲಿಸಿ ಏಳು ಜಿಲ್ಲೆಗಳ ಹೋರಾಟಕೆ ಬೆಂಬಲಿಸಿ ಏಳು ಜಿಲ್ಲೆಗಳ ಸಚಿವರು, ಶಾಸಕರು ಸಂಘಟಿತವಾದ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಕೇಂದ್ರದ ಮೇಲೆ ಒತ್ತಡ ತರಲು ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವುದು.
7. ಬೀದರನ ಕಾರಂಜಾ ಸಂತ್ರಸ್ತರ ಸಮರ್ಪಕ ಪರಿಹಾರದ ಬೇಡಿಕೆಯ ಬಗ್ಗೆ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕು.
8. ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳಂತೆ ಮಾನವ ಅಭಿವೃದ್ಧಿವೃದ್ಧಿಸಲು, ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ, ಕೃಷಿ, ಕೃಷಿಯೇತರ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕು.
9. ಗೋವಿಂದರಾವ ಸಮಿತಿ ಅಭಿವೃದ್ಧಿ ಯೋಜನೆಗಳಿಗೆ ಸರಕಾರ ಸ್ಪಂದಿಸಬೇಕು.
10. ಗೋವಿಂದರಾವ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈಲ್ವೆ ವಿಭಾಗೀಯ ಕೇಂದ್ರ ಕಚೇರಿ ಸ್ಥಾಪನೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು.
11. 371ನೇ(ಜೆ) ಕಲಂ ಅಡಿ ನಮ್ಮ ಪಾಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಿ ಭರ್ತಿ ಮಾಡಬೇಕು ಇಲ್ಲಿನ ನೌಕರರಿಗೆ ಮುಂಬಡ್ತಿ ನೀಡಲು ಸುಸೂತ್ರವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು.
12. ಪ್ರತಿ ವರ್ಷ ಒಂದನೇ ಜನೇವರಿಯಂದು 371ನೇ(ಜೆ) ಕಲಂ ಉತ್ಸವ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು.
13. ಕೆಕೆಆರ್ ಡಿಬಿ ಮಂಡಳಿ ಕಾಲಮಿತಿಯಲ್ಲಿ ಅಧ್ಯಕ್ಷರು ಮತ್ತು ಮಂಡಳಿಯ ಸದಸ್ಯರು ಹಾಗೂ ಮೇಲ್ವಿಚಾರಣಾ ಸಮಿತಿ, ಮೌಲ್ಯಮಾಪನ ಸಮಿತಿ, ಜಾಗೃತ ದಳ ಸಮಿತಿಗಳನ್ನು ರಚಿಸಬೇಕು.

Leave A Reply

Your email address will not be published.