Shubhashaya News

ದುಷ್ಚಟಗಳಿಂದ ದೂರವಾಗಿ ಸದೃಢರಾಗಿ: ಸಿಸ್ಟರ್ ಬಿ.ಕೆ. ಕವಿತಾ

ಕಲಬುರಗಿ, ಆ. 12: ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು, ಯುವಜನರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವ ಜೊತೆಗೆ ಯಾವುದೇ ದುಷ್ಚಟಗಳಿಗೆ ದಾಸರಾಗದೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ಸಂಚಾಲಕಿ ಸಿಸ್ಟರ್ ಬಿ.ಕೆ.ಕವಿತಾ ಕರೆ ನೀಡಿದರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಡಾ. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ, ಕಲಬುರಗಿ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾಮುಕ್ತ ಭಾರತ ಅಭಿಯಾನ’ ಹಾಗೂ ‘ಮಿಷನ್ ಸ್ಪಂದನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನರು ದುಷ್ಚಟಗಳಿಂದ ದೂರವಿದ್ದು, ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಂಡು ಶಿಸ್ತುಬದ್ಧ ಜೀವನ ನಡೆಸಿದಾಗ ಮಾತ್ರ ಅವರು ಕುಟುಂಬ, ಸಮಾಜ ಹಾಗೂ ದೇಶಕ್ಕೆ ಅಮೂಲ್ಯ ಸಂಪತ್ತಾಗಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನದ ಮಹತ್ವವನ್ನು ತಿಳಿಸಿ, ಎಲ್ಲ ವಿದ್ಯಾರ್ಥಿಗಳಿಗೂ ವ್ಯಸನಮುಕ್ತ ಪ್ರತಿಜ್ಞೆ ಬೋಧಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಅಂಬೇಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿದ್ದಪ್ಪ ಎಂ. ಕಾಂತ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ದುಷ್ಚಟಗಳಿಂದ ದೂರವಿದ್ದು ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನದತ್ತ ಗಮನಹರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ಸಿದ್ದಾರ್ಥ ಮದನಕರ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಅರುಣ್ ಜೋಳದಕೂಡ್ಲಿಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಸಂತ ನಾಶಿ ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ನಿರ್ಮಲ ಸಿರಗಾಪುರ, ಡಾ. ಗಾಂಧೀಜಿ ಮೊಳಕೇರಿ, ಡಾ. ಹರ್ಷವರ್ಧನ್, ಡಾ. ಸುದರ್ಶನ ಮದನಕರ, ಡಾ. ಅರುಣ್ ಕುಮಾರ್, ಡಾ. ಶಿವಕುಮಾರ, ಡಾ. ಕರಿಬಸಪ್ಪ, ಶ್ರೀಮತಿ ಕೌಶಲ್ಯ, ಡಾ. ದತ್ತೂರಾಯ, ರಾಜಶೇಖರ್, ಸಂಜೀವ ಪಾಟೀಲ್, ಶೃತಿ ಹಾಗೂ ಲಕ್ಷ್ಮಿಬಾಯಿ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply

Your email address will not be published.