Shubhashaya News

ಜೇವರ್ಗಿ: ಹೆಸರು, ಉದ್ದು ಬೆಳೆಗಳ ಕ್ಷೇತ್ರೋತ್ಸವ ಯಶಸ್ವಿ

ಜೇವರ್ಗಿ: ರೈತರಿಗೆ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳ ಅರಿವು ಮೂಡಿಸಿ, ಹೆಸರು ಮತ್ತು ಉದ್ದು ಬೆಳೆಗಳಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಪಡೆಯಲು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನದಡಿ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡಗಿ ವತಿಯಿಂದ ಹೆಸರು ಮತ್ತು ಉದ್ದು ಬೆಳೆಗಳ ಕ್ಷೇತ್ರೋತ್ಸವವನ್ನು ಬಾಪುನಗರ ಗ್ರಾಮದ ಪ್ರಗತಿಪರ ರೈತ ಅನೀಲಕುಮಾರ ಅವರ ಜಮೀನಿನಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ವಾಸುದೇವ ನಾಯ್ಕ್ ಮಾತನಾಡಿ, ರೈತರು ಹೆಸರು ಮತ್ತು ಉದ್ದು ಬೆಳೆಗಳಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ಪಾದಕತೆ ಹೆಚ್ಚಿಸುವುದರೊಂದಿಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ರೈತರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವುದರ ಜತೆಗೆ ಕ್ಷೇತ್ರಮಟ್ಟದಲ್ಲಿ ಹೊಸ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮೂಲಕ ಅವುಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಕೇಂದ್ರ ನಿರಂತರವಾಗಿ ಮಾಡುತ್ತಿದೆ ಎಂದರು.

ಬೇಳೆ ಬೆಳೆಗಳಲ್ಲಿ ಸಾರಜನಕ ಸ್ಥಿರೀಕರಣದ ಪ್ರಯೋಜನ ಪಡೆಯಲು ರೈಜೋಬಿಯಂ ಹಾಗೂ ಇತರೆ ಸೂಕ್ಷ್ಮ ಜೈವಿಕ ಗೊಬ್ಬರಗಳ ಬಳಕೆ, ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ ಮತ್ತು ನಿರ್ಣಾಯಕ ಹಂತಗಳಲ್ಲಿ ಅಗತ್ಯ ಪೋಷಕಾಂಶಗಳ ಪೂರೈಕೆ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿ ಡಾ. ಆರ್.ಎಲ್. ಜಾಧವ್ ಅವರು ಹೆಸರು ಮತ್ತು ಉದ್ದು ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ, ಗುಣಮಟ್ಟದ ಬೀಜ ಬಳಕೆ, ಸೂಕ್ತ ಬಿತ್ತನೆ ಹಾಗೂ ಇಳುವರಿ ಹೆಚ್ಚಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಹೆಸರು ಬೆಳೆಯ ಕಟಾವಿನ ನಂತರದ ತ್ಯಾಜ್ಯವನ್ನು ಸುಡದೆ ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಹಿಂಗಾರು ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದರು.

ಪ್ರಗತಿಪರ ರೈತ ಅನೀಲಕುಮಾರ ಅವರು ತಮ್ಮ ಕೃಷಿ ಅನುಭವ ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಿಂದ ಗುಣಮಟ್ಟದ ಬೀಜ, ಕಾಲಕಾಲಕ್ಕೆ ಸೂಕ್ತ ಸಲಹೆ ಪಡೆದು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ರೈತರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ರೈತರು ಭಾಗವಹಿಸಿ ಕ್ಷೇತ್ರೋತ್ಸವದ ಪ್ರಯೋಜನ ಪಡೆದರು.

Leave A Reply

Your email address will not be published.