Shubhashaya News

ಕೈಮಗ್ಗ: ದೇಶಿ ಪರಂಪರೆಯ ಪ್ರತೀಕ

​ನೇಕಾರಿಕೆ ಎಂಬುದು ಬದುಕನ್ನು ಕಟ್ಟಿಕೊಡುವ ಒಂದು ಕಲೆ ಹಾಗೂ ಭಾರತೀಯ ಪರಂಪರೆ, ತಾಳ್ಮೆ ಮತ್ತು ಸೃಜನಶೀಲತೆಯ ಜೀವಂತ ರೂಪ. ೧೯೦೫ರ ಆಗಸ್ಟ್ ೭ರಂದು ನಡೆದ ಸ್ವದೇಶಿ ಚಳವಳಿಯ ಐತಿಹಾಸಿಕ ಹೆಜ್ಜೆಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತಿದೆ. ಸಿಂಧೂ ಕಣಿವೆ ನಾಗರಿಕತೆಯಿಂದ ಹಿಡಿದು ರಾಮಾಯಣ, ಮಹಾಭಾರತ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರದವರೆಗೂ ನಮ್ಮ ನೇಕಾರಿಕೆಯ ಕುರುಹುಗಳು ಲಭ್ಯವಿವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರು ಚರಕ ಮತ್ತು ಮಗ್ಗವನ್ನು ಆರ್ಥಿಕ ಸ್ವಾವಲಂಬನೆಯ ಪ್ರಬಲ ಅಸ್ತ್ರವಾಗಿ ಬಳಸಿದರು. ಕೈಮಗ್ಗ ಎಂಬುದು ನಮ್ಮ ಮಣ್ಣಿನ ಕಲೆ, ಸ್ವಾಭಿಮಾನದ ಸಂಕೇತ ಹಾಗೂ ಗ್ರಾಮೀಣ ಬದುಕಿನ ಜೀವನಾಡಿಯಾಗಿದೆ. ಇಂದಿನ ಜಾಗತೀಕರಣ ಮತ್ತು ಯಾಂತ್ರೀಕರಣದ ಭರಾಟೆಯಲ್ಲಿ ಕೈಮಗ್ಗ ಕ್ಷೇತ್ರವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ.

​ಪರಿಸರ ಸ್ನೇಹಿ ಸುಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆ

ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗ ಒದಗಿಸುವ ಬಹುದೊಡ್ಡ ಗ್ರಾಮೀಣ ವಲಯ ಎಂದರೆ ಅದು ಕೈಮಗ್ಗ. ದೇಶದಲ್ಲಿ ಅಂದಾಜು ೩೫ ಲಕ್ಷಕ್ಕೂ ಹೆಚ್ಚು ನೇಕಾರರು ಈ ವೃತ್ತಿಯನ್ನು ನೆಚ್ಚಿಕೊಂಡಿದ್ದು, ಇದರಲ್ಲಿ ಮಹಿಳೆಯರ ಪಾಲು ಶೇಕಡಾ ೭೨ರಷ್ಟಿದೆ. ಮಹಿಳಾ ಸಬಲೀಕರಣಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿದೆ. ಇಂದಿನ ಜಗತ್ತು ‘ಫಾಸ್ಟ್ ಫ್ಯಾಷನ್’ ಎಂಬ ಪರಿಸರ ನಾಶಕ ವ್ಯವಸ್ಥೆಯತ್ತ ಓಡುತ್ತಿರುವಾಗ, ಕೈಮಗ್ಗವು ಪರಿಸರ ಸ್ನೇಹಿ ‘ಸ್ಲೋ ಫ್ಯಾಷನ್’ ಮಾದರಿಯನ್ನು ಎತ್ತಿಹಿಡಿಯುತ್ತದೆ. ಸಂಪೂರ್ಣವಾಗಿ ಮಾನವ ಶ್ರಮದಿಂದ ಹಾಗೂ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಾಗುವ ಈ ಬಟ್ಟೆಗಳು ಶೂನ್ಯ ಇಂಗಾಲ ಹೊರಸೂಸುವಿಕೆ ತತ್ತ್ವವನ್ನು ಪಾಲಿಸುತ್ತವೆ. ಬಿದಿರು, ಬಾಳೆ ನಾರು, ಸೆಣಬು ಮತ್ತು ಹತ್ತಿಯಂತಹ ನೈಸರ್ಗಿಕ ನಾರುಗಳನ್ನು ಬಳಸಿ ಸಿದ್ಧಪಡಿಸುವ ಈ ಉಡುಪುಗಳು ಚರ್ಮಕ್ಕೆ ಹಿತವನ್ನು ನೀಡುವುದರ ಜೊತೆಗೆ ಪರಿಸರ ಕಾಳಜಿಯ ಪ್ರತೀಕವಾಗಿವೆ.

​ವೈವಿಧ್ಯತೆಯ ಆಗರ

ಕರ್ನಾಟಕ ಮತ್ತು ಭಾರತದ ಕೈಮಗ್ಗ ಪರಂಪರೆ ಯಾವುದೇ ಒಂದು ನಿರ್ದಿಷ್ಟ ಪ್ರದೇಶ ಅಥವಾ ವಿನ್ಯಾಸಕ್ಕೆ ಸೀಮಿತವಾಗಿಲ್ಲ. ಇಳಕಲ್ ಸೀರೆಗಳು, ಮೈಸೂರು ಸಿಲ್ಕ್, ವಿಶಿಷ್ಟ ಕಲಾತ್ಮಕತೆಯ ಮೊಳಕಾಲ್ಮೂರು ರೇಷ್ಮೆ, ಬಿಸಿಲಿನ ಝಳಕ್ಕೆ ತಂಪೆರೆಯುವ ಉಡುಪಿಯ ಹತ್ತಿ ಸೀರೆಗಳು, ಕಣ್ಮನ ಸೆಳೆಯುವ ಗುಳೇದಗುಡ್ಡದ ಖಣದ ಬಟ್ಟೆಗಳು, ಬೆಳಗಾವಿ ಮತ್ತು ಧಾರವಾಡ ಭಾಗದ ವಿಶಿಷ್ಟ ಕಾಟನ್ ಬಟ್ಟೆಗಳು ನಮ್ಮ ನೇಕಾರಿಕೆಯ ಹೆಮ್ಮೆಯಾಗಿವೆ. ರಾಷ್ಟ್ರಮಟ್ಟದಲ್ಲಿ ಗಮನಿಸಿದರೆ, ಗುಜರಾತಿನ ಪಟೋಲಾ, ಉತ್ತರ ಪ್ರದೇಶದ ಬನಾರಸಿ, ಅಸ್ಸಾಂನ ಮುಗಾ ರೇಷ್ಮೆ ಮತ್ತು ತಮಿಳುನಾಡಿನ ಕಾಂಜೀವರಂನಂತೆ ಪ್ರತಿಯೊಂದು ಭೌಗೋಳಿಕ ಸೂಚ್ಯಂಕ ಪಡೆದ ಉತ್ಪನ್ನವೂ ತಾನು ಹುಟ್ಟಿದ ನೆಲದ ಸಂಸ್ಕೃತಿ ಮತ್ತು ಐತಿಹಾಸಿಕ ಕಥೆಯನ್ನು ಜಗತ್ತಿಗೆ ಸಾರುತ್ತದೆ.

ನೇಕಾರರ ಬದುಕಿನ ನೈಜ ಸವಾಲುಗಳು

ಕೈಮಗ್ಗದ ಸಾಂಸ್ಕೃತಿಕ ಮೌಲ್ಯ ಎಷ್ಟೇ ಉನ್ನತವಾಗಿದ್ದರೂ, ವಾಸ್ತವದಲ್ಲಿ ಮಗ್ಗದ ನೇಯ್ಗೆಯನ್ನು ನಂಬಿದವರ ಬದುಕು ಅತ್ಯಂತ ಸಂಕಷ್ಟದಲ್ಲಿದೆ. ಭಾರಿ ವೇಗದ ಯಂತ್ರಮಗ್ಗಗಳ ಅಬ್ಬರದ ಉತ್ಪಾದನೆಯ ಎದುರು ನಮ್ಮ ಕೈಮಗ್ಗದ ನೇಕಾರರು ಅಸ್ತಿತ್ವದ ಹೋರಾಟ ನಡೆಸುತ್ತಿದ್ದಾರೆ. ಯಂತ್ರಗಳಲ್ಲಿ ತಯಾರಾದ ಬಟ್ಟೆಗಳನ್ನು ‘ಕೈಮಗ್ಗ’ದ ಹೆಸರಿನಲ್ಲಿಯೇ ಮಾರುಕಟ್ಟೆಗೆ ತಂದು ಅಗ್ಗದ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಇದು ಮೂಲ ನೇಕಾರರ ಹೊಟ್ಟೆಯ ಮೇಲೆ ಹೊಡೆಯುವ ಕೃತ್ಯವಾಗಿದೆ.

​ಕಚ್ಚಾ ವಸ್ತುಗಳ, ವಿಶೇಷವಾಗಿ ಗುಣಮಟ್ಟದ ಹತ್ತಿ ನೂಲು ಮತ್ತು ರೇಷ್ಮೆ ದಾರದ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಗಳು ಕಚ್ಚಾ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಗಳು ನೇಕಾರರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿವೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ಮಾರುಕಟ್ಟೆಯಲ್ಲಿ ಕೈಮಗ್ಗದ ಬಟ್ಟೆಗಳು ದುಬಾರಿ ಬೆಲೆಗೆ ಮಾರಾಟವಾದರೂ, ಅದರ ನೈಜ ಲಾಭ ಶ್ರಮಿಕ ನೇಕಾರನ ಕೈಸೇರುತ್ತಿಲ್ಲ. ನೇಕಾರರ ಆರೋಗ್ಯ ಸಮಸ್ಯೆಗಳಿಗೆ, ವಿಶೇಷವಾಗಿ ಕಣ್ಣಿನ ದೃಷ್ಟಿ ದೋಷ ಮತ್ತು ಬೆನ್ನುನೋವಿಗೆ ಸೂಕ್ತ ವೈದ್ಯಕೀಯ ವಿಮೆ ಹಾಗೂ ಪರಿಹಾರಗಳ ಕೊರತೆ ಎದ್ದುಕಾಣುತ್ತಿದೆ. ಈ ಆರ್ಥಿಕ ಅಭದ್ರತೆಯಿಂದಾಗಿ ಯುವ ಪೀಳಿಗೆಯು ಈ ಪರಂಪರಾಗತ ಕಸುಬಿನಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

​ಪರಿಹಾರ ಮತ್ತು ಭರವಸೆಯ ಮಾರ್ಗಗಳು

ಈ ಕಲೆ ಮತ್ತು ಸಮುದಾಯವನ್ನು ಉಳಿಸಲು ಭರವಸೆಗಳ ಬದಲು ಪರಿಣಾಮಕಾರಿ ಆರ್ಥಿಕ ನೀತಿಗಳ ಅಗತ್ಯವಿದೆ. ಕಚ್ಚಾ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುವುದು, ನೇಕಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವುದು ತುರ್ತಾಗಿ ಆಗಬೇಕಿದೆ. ‘ಕೈಮಗ್ಗ ಮೀಸಲಾತಿ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ನಕಲಿ ಉತ್ಪನ್ನಗಳ ಹಾವಳಿಯನ್ನು ತಡೆಯಬೇಕು. ‘ಹ್ಯಾಂಡ್ಲೂಮ್ ಮಾರ್ಕ್’ ಯೋಜನೆ ಪರಿಣಾಮಕಾರಿಯಾಗಿ ಗ್ರಾಹಕರಿಗೆ ತಲುಪಬೇಕು.

​ಡಿಜಿಟಲ್ ತಂತ್ರಜ್ಞಾನ ಮತ್ತು ಆನ್‌ಲೈನ್ ಮಾರುಕಟ್ಟೆಗಳ ಮೂಲಕ ನೇಕಾರರೇ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ‘ನೇರ ಮಾರುಕಟ್ಟೆ’ ವ್ಯವಸ್ಥೆ ಬಲಗೊಳ್ಳಬೇಕು. ಆಧುನಿಕ ವಿನ್ಯಾಸಕಾರರು ನೇಕಾರರೊಂದಿಗೆ ಕೈಜೋಡಿಸಿ, ಇಂದಿನ ಯುವಜನತೆಯ ಅಭಿರುಚಿಗೆ ತಕ್ಕಂತೆ ನವೀನ ಮಾದರಿಯ ಉಡುಪುಗಳನ್ನು ಸಿದ್ಧಪಡಿಸುವ ತರಬೇತಿ ಕೇಂದ್ರಗಳನ್ನು ವಿಸ್ತರಿಸುವ ಅಗತ್ಯವಿದೆ.

ಕೈಮಗ್ಗದ ಉಳಿವು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ನಾವು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರ ಆರ್ಥಿಕ ಸಬಲೀಕರಣಕ್ಕೆ ನೇರವಾಗಿ ಕಾರಣರಾಗುತ್ತೇವೆ. ಹಬ್ಬ-ಹರಿದಿನಗಳಲ್ಲಿ, ದೈನಂದಿನ ಕಚೇರಿ ಕೆಲಸಗಳಲ್ಲಿ ಹಾಗೂ ವಿಶೇಷ ಸಮಾರಂಭಗಳಲ್ಲಿ ದೇಶಿ ಉಡುಪುಗಳನ್ನು ಧರಿಸುವುದು ನಮ್ಮ ಹೆಮ್ಮೆಯಾಗಬೇಕು. ನಮ್ಮೆಲ್ಲರ ಒಂದು ಸಣ್ಣ ಪ್ರಯತ್ನ ಗ್ರಾಮೀಣ ಕುಟುಂಬವೊಂದಕ್ಕೆ ಆಸರೆಯಾಗುತ್ತದೆ. ಕೈಮಗ್ಗ ನಮ್ಮ ದೇಶದ ಇತಿಹಾಸ, ಪರಂಪರೆ ಹಾಗೂ ನೇಕಾರನ ಬೆವರಿನ ಪ್ರತಿಫಲವಾಗಿದೆ. ನಮ್ಮ ಸಾಂಪ್ರದಾಯಿಕ ಕರಕುಶಲತೆಯನ್ನು ಉಳಿಸಿ ಬೆಳೆಸುವ ಮೂಲಕ ಆರ್ಥಿಕ ಹಾಗೂ ಪರಿಸರ ಸ್ನೇಹಿ ಸುಸ್ಥಿರ ಭವಿಷ್ಯಕ್ಕೆ ಒಟ್ಟಾಗಿ ನಾಂದಿ ಹಾಡೋಣ.

ಶಿವರಾಜ ಸೂ. ಸಣಮನಿ, ಮದಗುಣಕಿ

shivrajsanamani@gmail.com

9739741141

Leave A Reply

Your email address will not be published.