ಸಮಕಾಲೀನ ವಿವಿಧ ಆಯಾಮಗಳ ಪ್ರತಿರೂಪವೇ ಚಿತ್ರಕಲೆ: ಡಾ. ಮಲ್ಲಿಕಾರ್ಜುನ ಬಾಗೋಡಿ
ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಮಲ್ಲಿಕಾರ್ಜುನ ಮುಗಳಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲಬುರಗಿ: ಸಮಕಾಲೀನ ಬದುಕಿನ ವಿವಿಧ ಆಯಾಮಗಳ ಪ್ರತಿರೂಪವೇ ಕಲೆ. ದೇಶದ ನೆಲ, ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಚರಿತ್ರೆಯ ನಿರ್ಮಾಣದಲ್ಲಿ ಚಿತ್ರಕಲಾ ಕೃತಿಗಳು ಮಹತ್ವದ ದಾಖಲೆಗಳಾಗಿ ಉಳಿಯುತ್ತವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಮಲ್ಲಿಕಾರ್ಜುನ ಬಾಗೋಡಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದಡಿ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಯುವ ಚಿತ್ರಕಲಾವಿದ ಮಲ್ಲಿಕಾರ್ಜುನ ಸಿ. ಮುಗಳಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಮಕಾಲೀನ ಸಂದರ್ಭಗಳನ್ನು ಕಲಾಕೃತಿಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ಕಲಾವಿದ ನಿರಂತರ ಓದು, ಪ್ರಾಯೋಗಿಕ ಜ್ಞಾನ ಹಾಗೂ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಕಲಾವಿದರ ಬೆಳವಣಿಗೆಗೆ ಹಾಗೂ ಚಿತ್ರಕಲೆ–ಶಿಲ್ಪಕಲಾ ಕ್ಷೇತ್ರದ ಅಭಿವೃದ್ಧಿಗೆ ನಗರದ ಕಲಾ ಗ್ಯಾಲರಿಗಳು ಮಹತ್ವದ ಕೊಡುಗೆ ನೀಡುತ್ತಿವೆ. ಕಲಾ ವಲಯದಲ್ಲಿ ಹೊಸತನದ ಜತೆಗೆ ದೂರದೃಷ್ಟಿಯೂ ಬೆಳೆಯುತ್ತಿದೆ ಎಂದರು.
ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲಾವಿದನ ಬದುಕು ಕಲಾತ್ಮಕವಾಗಿರಬೇಕಾದರೆ ಕಲೆಯೇ ಜೀವನವಾಗಬೇಕು. ನಿರಂತರ ಅಭ್ಯಾಸ ಹಾಗೂ ಕಲೆಯ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವುದರಿಂದ ಮಾತ್ರ ಕಲಾವೃತ್ತಿಯಲ್ಲಿ ಹಿಡಿತ ಸಾಧಿಸಿ ಶ್ರೇಷ್ಠ ಕಲಾವಿದನಾಗಲು ಸಾಧ್ಯ. ಅಭ್ಯಾಸವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲದಂತೆ, ನಿರಂತರ ಅಭ್ಯಾಸವಿಲ್ಲದೆ ಉತ್ತಮ ಕಲಾವಿದನಾಗಲು ಸಾಧ್ಯವಿಲ್ಲ. ಕೌಶಲ್ಯ ಮತ್ತು ಆತ್ಮಸ್ಥೈರ್ಯವೇ ಕಲಾವಿದರಿಗೆ ಭದ್ರ ಬುನಾದಿ ಎಂದರು.
ಚಿತ್ರಕಲಾವಿದ ಬಸವರಾಜ ವಿ. ಕಮಾಜಿ ಅವರು ಪ್ರದರ್ಶಿತ ಕಲಾಕೃತಿಗಳ ಕುರಿತು ಮಾತನಾಡಿ, ಯುವ ಕಲಾವಿದ ಮಲ್ಲಿಕಾರ್ಜುನ ಮುಗಳಿ ಅವರ ನಿಸರ್ಗ ಹಾಗೂ ಭೂದೃಶ್ಯ ಚಿತ್ರಗಳಲ್ಲಿ ಪ್ರಕೃತಿಯ ಸೌಂದರ್ಯ ಮನಮೋಹಕವಾಗಿ ಮೂಡಿಬಂದಿದೆ. ನದಿ, ಬೆಟ್ಟ, ಹಳ್ಳ–ಕೊಳ್ಳ, ಗುಡಿ–ಗೋಪುರ, ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು, ಕೋಟೆ–ದೇಗುಲಗಳು ಹಾಗೂ ವಿಶೇಷ ಕಮಾನುಗಳ ದೃಶ್ಯಗಳನ್ನು ಮುಂಜಾನೆಯ ಎಳೆಬಿಸಿಲು ಮತ್ತು ನೆರಳು–ಬೆಳಕಿನ ಸಂಯೋಜನೆಯೊಂದಿಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮಲ್ಲಿಕಾರ್ಜುನ ಅವರು ಭರವಸೆಯ ಯುವ ಕಲಾವಿದರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿತ್ರಕಲಾವಿದ ಚಂದ್ರಹಾಸ ವೈ. ಜಾಲಿಹಾಳ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಪೋಷಿಸುವುದರ ಜತೆಗೆ ಕಲಾಕೃತಿಗಳ ಕುರಿತು ವಿಮರ್ಶೆ ಹಾಗೂ ಚರ್ಚೆಯೂ ಅಗತ್ಯ. ಕಲಾಕೃತಿಯ ವಸ್ತು, ಭಾಷೆ, ಬಣ್ಣಗಳ ಬಳಕೆ ಮತ್ತು ಚಿತ್ರ ಸಂಯೋಜನೆ ಪ್ರಮುಖವಾಗಿವೆ. ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರ ಭಾವನೆಗಳನ್ನು ಕೆರಳಿಸಿ ಹೃದಯಸ್ಪರ್ಶಿಸುವ ಜೀವಂತಿಕೆ ಕಲಾಕೃತಿಯಲ್ಲಿ ಇರಬೇಕು. ಇದಕ್ಕೆ ಕಲಾವಿದನ ಕುಶಲತೆ ಮತ್ತು ಕೌಶಲ್ಯ ಅಗತ್ಯ ಎಂದರು.
ಕಲಾವಿದರಾದ ಅಶೋಕ ಶೆಟಕಾರ, ಅಂಬಾರಾಯ ಚಿನಮಳಿ, ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ಜಲಜಾಕ್ಷಿ ಕುಲಕರ್ಣಿ, ಕೆ.ಪಿ. ವಿಜಯ ಔರಾದ, ಸುರೇಶ್ ಸಿ.ಎಂ., ಬಿ.ಎನ್. ಪಾಟೀಲ, ಡಾ. ಪರಶುರಾಮ ಪಿ., ಸೂರ್ಯಕಾಂತ ನಂದೂರ, ರಾಮಗಿರಿ ಪೊಲೀಸ್ ಪಾಟೀಲ, ದಾನಯ್ಯ ಚೌಕಿಮಠ, ವೆಂಕಟೇಶ ಪಾಟೀಲ, ನೀಲಾಂಬಿಕ ಹಿರೇಮಠ ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕು. ಕಾವ್ಯ ಕುಲಕರ್ಣಿ ಪ್ರಾರ್ಥಿಸಿದರು. ಯುವ ಕಲಾವಿದೆ ಕವಿತಾ ಕಟ್ಟೆ ಸ್ವಾಗತಿಸಿದರು. ವೇದ ಪಬ್ಲಿಕ್ ಸ್ಕೂಲ್ ಶಿಕ್ಷಕ ಶರಣಬಸಪ್ಪ ಎಂ. ಬೊಮನಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
### ನಿಸರ್ಗ ಚಿತ್ರಗಳಲ್ಲಿ ಅದ್ಭುತ ಕಲಾಭಿವ್ಯಕ್ತಿ
ಮಲ್ಲಿಕಾರ್ಜುನ ಮುಗಳಿ ಅವರ ನಿಸರ್ಗ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಅವರ ನಿರಂತರ ಅಭ್ಯಾಸ ಮತ್ತು ಪ್ರಯತ್ನ ಕಲಾಭಿವ್ಯಕ್ತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ದೇವಾಲಯಗಳು ಹಾಗೂ ಕಮಾನುಗಳ ನೆರಳು–ಬೆಳಕಿನ ವಿಹಂಗಮ ನೋಟಗಳಲ್ಲಿ ನೈಸರ್ಗಿಕ ಸೌಂದರ್ಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕಲಾ ಜ್ಞಾನ, ಕುಂಚದ ಚಲನೆ ಹಾಗೂ ವರ್ಣಗಳ ಬಳಕೆಯ ಮೂಲಕ ಚಿತ್ರಗಳಲ್ಲಿ ವೈವಿಧ್ಯತೆ ಮೂಡಿಸಿರುವುದು ವಿಶೇಷ.
— ನಾಡೋಜ ಡಾ. ಜೆ.ಎಸ್. ಖಂಡೇರಾವ್
(ಖ್ಯಾತ ಹಿರಿಯ ಚಿತ್ರಕಲಾವಿದರು, ಕಲಬುರಗಿ)