ಕಲಬುರಗಿ: ದಾಸ ಸಾಹಿತ್ಯದ ಸಮಗ್ರ ಸಂಶೋಧನೆ ಹಾಗೂ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಎಂದು ೪ನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸುರೇಶ ಎಲ್. ಜಾಧವ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ದಕ್ಷಿಣ ವಲಯದ ಆಶ್ರಯದಲ್ಲಿ ಭಾನುವಾರ ನಡೆದ ಕಲಬುರಗಿ ವಿಭಾಗದ ೪ನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾಸ ಸಾಹಿತ್ಯ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಪೀಠ ಸ್ಥಾಪನೆಯಾದರೆ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ದಾಸರ ಬದುಕು, ಬರಹ ಹಾಗೂ ಅವರ ಚಿಂತನೆಗಳಲ್ಲಿ ಇಂದಿನ ಸಮಾಜಕ್ಕೆ ಮಾದರಿಯಾಗುವ ಹಲವು ಮೌಲ್ಯಗಳಿವೆ. ಅವುಗಳ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.
ದಾಸ ಪರಂಪರೆಯ ಈ ನೆಲದಲ್ಲಿ ಸಾರ್ಥಕ ಬದುಕಿಗೆ ಅಗತ್ಯವಾದ ಅಪಾರ ಜ್ಞಾನ ಸಂಪತ್ತಿದೆ. ಆದರೆ ದಾಸ ಸಾಹಿತ್ಯವನ್ನು ಕೇವಲ ಜಾತಿ ಅಥವಾ ಭಕ್ತಿ ಸಾಹಿತ್ಯದ ಚೌಕಟ್ಟಿನಲ್ಲಿ ನೋಡುವುದು ವಿಪರ್ಯಾಸ. ದಾಸ ಸಾಹಿತ್ಯ ಜಾತ್ಯತೀತ ಹಾಗೂ ಸಾರ್ವಕಾಲಿಕವಾದದ್ದು. ಹೀಗಾಗಿ ಅದನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಧುನಿಕ ದಾಸ ಸಾಹಿತ್ಯದ ಸೃಷ್ಟಿ ನಡೆಯುತ್ತಿದ್ದು, ಅದರಲ್ಲೂ ಮಹಿಳೆಯರು ಹೆಚ್ಚಿನ ಕೊಡುಗೆ ನೀಡುತ್ತಿರುವುದು ಗಮನಾರ್ಹ. ಅಂತರಂಗದ ಶುದ್ಧಿಗೆ ದಾಸ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ದಾಸರ ಪದಗಳ ಸಂಪಾದನೆ ಹಾಗೂ ಪ್ರಕಟಣೆ ಕಾರ್ಯವೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ದಾಸ ಸಾಹಿತ್ಯ ಮಕ್ಕಳಿಗೆ ಪರಿಚಯವಾಗಲಿ:
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಡಿ.ಬಿ. ನಾಯಕ, ದಾಸ ಸಾಹಿತ್ಯದ ಸಾರವನ್ನು ಮಕ್ಕಳಿಗೆ ಸರಳವಾಗಿ ತಿಳಿಸುವ ಕಾರ್ಯ ಹೆಚ್ಚಾಗಬೇಕು. ದಾಸ ಸಾಹಿತ್ಯ ಪಕ್ಷಾತೀತ ಹಾಗೂ ಜಾತ್ಯತೀತವಾಗಿದ್ದು, ಎಲ್ಲರಿಗೂ ಅನ್ವಯಿಸುವ ಜೀವನ ಮೌಲ್ಯಗಳನ್ನು ಒಳಗೊಂಡಿದೆ. ಶಾಲಾ-ಕಾಲೇಜುಗಳ ಪಠ್ಯಕ್ರಮಗಳಲ್ಲಿ ದಾಸ ಸಾಹಿತ್ಯವನ್ನು ಸಮರ್ಪಕವಾಗಿ ಅಳವಡಿಸಬೇಕು. ಮಕ್ಕಳಿಗೆ ಶರಣ ತತ್ವ ಹಾಗೂ ದಾಸ ಪರಂಪರೆಯ ವಿಚಾರಗಳನ್ನು ಪರಿಚಯಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ಮಾತನಾಡಿ, ವಚನ ಹಾಗೂ ದಾಸ ಸಾಹಿತ್ಯದಲ್ಲಿ ಜೀವನಾನುಭವ, ತತ್ವ ಮತ್ತು ಸಿದ್ಧಾಂತಗಳು ಅಡಕವಾಗಿವೆ. ಇಂದಿನ ಸಾಮಾಜಿಕ ಪರಿವರ್ತನೆ ಹಾಗೂ ಸಾರ್ಥಕ ಜೀವನಕ್ಕೆ ದಾಸರ ಸಾಹಿತ್ಯದ ಸಂದೇಶಗಳು ಅಗತ್ಯವಾಗಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಲ್ಲಣ್ಣ ಮಡಿವಾಳ, ಕಾರ್ಯಾಧ್ಯಕ್ಷರಾದ ವೀರಣ್ಣ ಹೊನ್ನಳ್ಳಿ, ರಮೇಶ ಚಿಚಕೋಟೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ ಸೇರಿದಂತೆ ಹಲವರು ಮಾತನಾಡಿದರು.
ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಮುದಗಲ್ ವೆಂಕಟೇಶ, ಶಾಮರಾವ ಚಿಂಚೋಳಿ, ಗೋಪಾಲರಾವ ಟೆಂಗಳಿ, ಡಾ. ರಮೇಶ ಕುಲಕರ್ಣಿ ಹಾಗೂ ಸುರೇಶ ಕೊಟಗಿ, ಬಾಬುರಾವ ಕುಲಕರ್ಣಿ ಅವರನ್ನು ‘ದಾಸಾಮೃತ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ನಂತರ ನಡೆದ ‘ದಾಸ ದರ್ಶನ’ ಗೋಷ್ಠಿಯಲ್ಲಿ ‘ದಾಸ ಸಾಹಿತ್ಯದಲ್ಲಿ ಸಾಮಾಜಿಕ ಸಾಮರಸ್ಯದ ನೆಲೆಗಳು’ ಕುರಿತು ಡಾ. ಅಂಬುಜಾ ಮಳಖೇಡಕರ್, ‘ದಾಸ ಸಾಹಿತ್ಯ: ಧೋರಣೆ–ಪ್ರೇರಣೆ’ ಕುರಿತು ಡಾ. ವಿಜಯಕುಮಾರ ಗೋತಗಿ ಹಾಗೂ ‘ಸಮ್ಮೇಳನಾಧ್ಯಕ್ಷರ ಬದುಕು–ಬರಹ’ ಕುರಿತು ಡಾ. ಶಾಮಲಾ ಸ್ವಾಮಿ ವಿಚಾರ ಮಂಡಿಸಿದರು. ಸಾಹಿತಿ ಡಾ. ಕೆ.ಎಸ್. ಬಂಧು ಅಧ್ಯಕ್ಷತೆ ವಹಿಸಿದ್ದರು.
ನೂಪುರ ಸಂಸ್ಕೃತಿ ನೃತ್ಯ ಹಾಗೂ ಸಂಗೀತ ಸಂಸ್ಥೆ, ಶೃತಿ ಸಗರ ಮತ್ತು ಸಂಗಡಿಗರು, ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ಮಕ್ಕಳು, ಹರಿಹರ ಭಜನಾ ಮಂಡಳಿ ಹಾಗೂ ಪಾಂಡುರಂಗ ಭಜನಾ ಮಂಡಳಿಯ ಸದಸ್ಯರು ದಾಸರ ಹಾಡು, ಭಜನೆ ಹಾಗೂ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು.
ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿ, ದಾಸ ಸಾಹಿತ್ಯದ ಹೊಸ ಆಲೋಚನೆಗಳನ್ನು ರೂಪಿಸುವ ಹಾಗೂ ಮುನ್ನಡೆಸುವಲ್ಲಿ ಇಂತಹ ಸಮ್ಮೇಳನಗಳು ಪೂರಕವಾಗಿವೆ. ದಾಸ ಸಾಹಿತ್ಯ ಜನಮುಖಿ ಮತ್ತು ಸಮಾಜಮುಖಿಯಾಗಬೇಕಾದರೆ ಅದರ ನಿರಂತರ ಅಧ್ಯಯನ ಹಾಗೂ ಸಂಶೋಧನೆ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆನಂದತೀರ್ಥ ಜೋಶಿ, ಅವಿನಾಶ ಕುಲಕರ್ಣಿ, ವಿಜಯಕುಮಾರ ಕಟ್ಟಿಮನಿ, ಜಯಶ್ರೀ ಯಾದಗಿರಿ, ಶಿವಕುಮಾರ ಸಿ.ಎಚ್., ಚಂದ್ರಕಾಂತ ಸೂರನ್, ಸಂಗಪ್ಪ ಭೀಮಳ್ಳಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸೇವಾ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.