ಕಲಬುರಗಿ: ಆಳಂದ ತಾಲೂಕಿನ ಮಾಡಿಯಾಳ ಸೇರಿದಂತೆ ವಿವಿಧ ಗ್ರಾಮದಲ್ಲಿನ ಸಾರ್ವಜನಿಕ ಶೌಚಾಲಯಗಳ ದಯನೀಯ ಸ್ಥಿತಿಯನ್ನು ಖಂಡಿಸಿ ಹಾಗೂ ಗ್ರಾಮದಲ್ಲಿ ಶಾಶ್ವತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನೇತೃತ್ವದಲ್ಲಿ ಆಳಂದದಿಂದ ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿವರೆಗೆ ಶಾಂತಿಯುತ ಪಾದಯಾತ್ರೆ ನಡೆಸಲಾಯಿತು.
ಪಾದಯಾತ್ರೆಯ ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಮಾಡಿಯಾಳ ಗ್ರಾಮದಲ್ಲಿ ಸುಮಾರು 12 ಸಾವಿರ ಜನಸಂಖ್ಯೆ ಇದ್ದರೂ ಸಾರ್ವಜನಿಕ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಇಲ್ಲದೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮದಲ್ಲಿರುವ ನಾಲ್ಕು ಸಾರ್ವಜನಿಕ ಶೌಚಾಲಯಗಳ ಪೈಕಿ ಎರಡು ಸಂಪೂರ್ಣ ಶಿಥಿಲಗೊಂಡಿದ್ದು, ಮತ್ತೊಂದು ಶೌಚಾಲಯವು ಮೇಲ್ಛಾವಣಿ, ನೀರು, ವಿದ್ಯುತ್ ಹಾಗೂ ಸ್ವಚ್ಛತಾ ಸೌಲಭ್ಯಗಳ ಕೊರತೆಯಿಂದ ಬಳಕೆಗೆ ಅಯೋಗ್ಯವಾಗಿದೆ. ಇನ್ನೊಂದು ಶೌಚಾಲಯದ ನಿರ್ಮಾಣ ಕಾರ್ಯ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ ಇದುವರೆಗೆ ಸಾರ್ವಜನಿಕರ ಬಳಕೆಗೆ ನೀಡಿಲ್ಲ ಎಂದು ದೂರಿದರು.
“ಮಹಿಳೆಯರ ಘನತೆ ಮತ್ತು ಸುರಕ್ಷತೆಗಾಗಿ ಸುರಕ್ಷಿತ ಶೌಚಾಲಯ ಸೌಲಭ್ಯ ಅತ್ಯಗತ್ಯವಾಗಿದೆ. ಮಾಡಿಯಾಳ ಗ್ರಾಮದ ಜನರಿಗೆ ಮಾನವೀಯ ಘನತೆಗೆ ತಕ್ಕಂತೆ ಸ್ವಚ್ಛ ಹಾಗೂ ಶಾಶ್ವತ ಶೌಚಾಲಯ ವ್ಯವಸ್ಥೆ ಕಲ್ಪಿಸುವವರೆಗೆ ಹೋರಾಟ ಮುಂದುವರಿಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಆಳಂದ ತಾಲೂಕು ಅಧ್ಯಕ್ಷ ರಫಿಕ್ ಇನಾಮ್ದಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಜಾಕೀರ್ ಅಹ್ಮದ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ, ಯುವ ಘಟಕದ ಅಧ್ಯಕ್ಷ ಪ್ರವೀಣ ಜಾಧವ, ಹಿರಿಯ ಉಪಾಧ್ಯಕ್ಷ ಮಹಾತಂಪ್ಪ ಮದರಿ, ವೆಂಕಟೇಶ ರಾಠೋಡ್, ಸೈಫಾನ್ ಪಟೇಲ್, ಮಶಾಕ್ ಡಾಂಗೆ, ಅರ್ಬಾಜ್ ಶೇಖ್, ಆಮೀರ್ ಅನ್ಸಾರಿ ಸೇರಿದಂತೆ ಜೆಡಿಎಸ್ ಮುಖಂಡರು, ಮಹಿಳಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.