Shubhashaya News

ಭೂಮಾನಂದ್ ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಬಿಎಸ್‌ಪಿ ಆಗ್ರಹ

ಕಲಬುರಗಿ: ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ರಾಯಚೂರು ಜಿಲ್ಲಾ ಉಸ್ತುವಾರಿಯಾಗಿದ್ದ ಭೂಮಾನಂದ್ ಅವರ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಎಸ್‌ಪಿ ಕಲಬುರಗಿ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಪಕ್ಷದ ಮುಖಂಡರು, ಹತ್ಯೆ ಪ್ರಕರಣವು ಖಂಡನೀಯವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೃತ ಭೂಮಾನಂದ್ ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸುವುದರ ಜೊತೆಗೆ, ಸರ್ಕಾರದ ನಿಯಮಾನುಸಾರ ₹1 ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿ ಗೌರಮ್ಮ ಅವರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿ ಕುಟುಂಬದ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಶಿವಯೋಗಿ ಡಿ. ಹಡಗಿಲ್‌ಕರ್, ರಾಜ್ಯ ಸಂಯೋಜಕ ಹಾಗೂ ಕಲಬುರಗಿ ವಲಯ ಉಸ್ತುವಾರಿ ಎಲ್.ಆರ್. ಭೋಸಲೆ, ರಾಜ್ಯ ಕಾರ್ಯದರ್ಶಿಗಳಾದ ಡಾ. ಅನೀಲ ಟೇಂಗಳಿ, ತಿಪ್ಪಣ್ಣ ಎಂ. ಕಿನ್ನೂರ, ರಾಜ್ಯ ಸಮಿತಿ ಸದಸ್ಯ ಮೈಲಾರಿ ಶೆಳ್ಳಗಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave A Reply

Your email address will not be published.