Shubhashaya News

ಶಾಖಾಪುರ ಪ್ರಕರಣ: 17 ಆರೋಪಿಗಳ ಬಂಧನಕ್ಕೆ ಸಂತೋಷ ಪೂಜಾರಿ ಆಗ್ರಹ

ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಘಟನೆಯಲ್ಲಿ ಪರಾರಿಯಾಗಿರುವ 17 ಆರೋಪಿಗಳನ್ನು ತಕ್ಷಣ ಬಂಧಿಸಿ, ಪ್ರಕರಣದ ತನಿಖೆಯನ್ನು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕು ಎಂದು ಗೊಂಡ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಂತೋಷ ಎಸ್. ಪೂಜಾರಿ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಪದಾಧಿಕಾರಿಗಳು, ದೂರುದಾರರು ಹಾಗೂ ಸಾಕ್ಷಿಗಳಿಗೆ ರಕ್ಷಣೆ ನೀಡಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಾಲೂಕು ಆಡಳಿತ ತಕ್ಷಣ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಮಾಡಿರುವ ಅವರು, ಪರಾರಿಯಾಗಿರುವ ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಬೇಕು ಎಂದು ಒತ್ತಾಯ ಮಾಡಿದರು.

ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಸುರಪುರ ಬಂದ್ ಹಾಗೂ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭೀಮಣ್ಣ ಕರೆ, ಪೀರಪ್ಪ ಪೂಜಾರಿ, ಸಚಿನ್ ಎಸ್., ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.