Shubhashaya News

ಶಾಸಕನ ಪುತ್ರನ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಜೀವ ಬೆದರಿಕೆ: ಎಫ್‌ಐಆರ್ ದಾಖಲು

ಕಲಬುರಗಿ: ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಆಕಾಶ್ ಮತ್ತಿಮಡು ವಿರುದ್ಧ ದಾಖಲಿಸಿರುವ ಖಾಸಗಿ ದೂರನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ, ಮೊಬೈಲ್ ಕರೆ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾಳನೂರ ತಾಂಡಾ ನಿವಾಸಿಯಾಗಿರುವ ಸಮಾಜ ಸೇವಕ ರಾಮು ರಾಠೋಡ ಅವರು ನೀಡಿದ ದೂರಿನ ಪ್ರಕಾರ, ಕಲಬುರಗಿ ತಾಲೂಕಿನ ಕೇರೂರ ಗ್ರಾಮದ ಸರ್ವೇ ನಂ. 55/8ರ ಒಂದು ಎಕರೆ ಜಮೀನಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿ.ಸಿ. ನಂ. 250/2025) ದಾಖಲಿಸಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಜುಲೈ 19ರಂದು ರಾತ್ರಿ ಸುಮಾರು 11 ಗಂಟೆಗೆ 9606329099 ಸಂಖ್ಯೆಯಿಂದ ಅವರ ಮೊಬೈಲ್‌ಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಗುಡಿಗುಂಡಾ ತಾಂಡಾದ ರವಿ ರಾಠೋಡ ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಮಗನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕುಟುಂಬ ಸಮೇತ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ ಮೊದಲಿಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಎನ್.ಸಿ. ನಂ. 09/2026 ದಾಖಲಿಸಲಾಗಿತ್ತು. ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 351(2) ಹಾಗೂ 352ರ ವ್ಯಾಪ್ತಿಗೆ ಬರುವ ಅಸಂಜ್ಞೆಯ ಅಪರಾಧವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಕೋರಲಾಗಿತ್ತು.
ಜಿಲ್ಲಾ ನ್ಯಾಯಾಲಯದಿಂದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಅನುಮತಿ ದೊರೆತ ಬಳಿಕ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪೊಲೀಸರು ಗುನ್ನೆ ನಂ. 186/2026ರಲ್ಲಿ ಬಿಎನ್‌ಎಸ್ ಕಲಂ 351(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.