ಶುಕ್ರವಾಡಿ ಹೊನ್ನಳ್ಳಿ ರಸ್ತೆ ನಿರ್ಮಾಣ ವಿವಾದಕ್ಕೆ ನ್ಯಾಯಾಲಯ ಯಥಾಸ್ಥಿತಿ ಆದೇಶ
ಲಿಖಿತ ಹೇಳಿಕೆ ಸಲ್ಲಿಸುವವರೆಗೆ ಯಾವುದೇ ಬದಲಾವಣೆ ಬೇಡ; ಪ್ರಕರಣ ಜು.೧೫ಕ್ಕೆ ಮುಂದೂಡಿಕೆ
ಆಳಂದ: ತಾಲೂಕಿನ ಹೊನ್ನಳ್ಳಿ ಹಾಗೂ ಶುಕ್ರವಾಡಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ಸಂಬAಧಿಸಿದ ವಿವಾದಿತ ಜಮೀನಿನ ಪ್ರಕರಣದಲ್ಲಿ ಆಳಂದ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯವು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರತಿವಾದಿಗಳು ತಮ್ಮ ಲಿಖಿತ ಹೇಳಿಕೆ ಹಾಗೂ ಆಕ್ಷೇಪಣೆ ಸಲ್ಲಿಸುವವರೆಗೆ ವಿವಾದಿತ ಜಾಗದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಉಭಯ ಪಕ್ಷಗಳಿಗೆ ನಿರ್ದೇಶನ ನೀಡಿದೆ.
ಈ ಪ್ರಕರಣವು ಓ.ಎಸ್.ನಂ. ೧೦೦/೨೦೨೬ ಆಗಿದ್ದು, ಇದು ತಡೆಯಾಜ್ಞೆ (Iಟಿರಿuಟಿಛಿಣioಟಿ Suiಣ) ಸಂಬAಧಿತ ದಾವೆಯಾಗಿದೆ. ಪ್ರಕರಣವನ್ನು ಜುಲೈ ೨ರಂದು ದಾಖಲಿಸಲಾಗಿದ್ದು, ವಾದಿಗಳ ಪರವಾಗಿ ಹಿರಿಯ ವಕೀಲ ಎಸ್.ಎ. ಕಠಾರೆ ವಾದ ಮಂಡಿಸುತ್ತಿದ್ದಾರೆ.
ದಾವೆಯಲ್ಲಿ ಶಿವಪುತ್ರ ಬಿರಾದಾರ್ (೭೫), ಈಶ್ವರ್ ಕಮಲಾಪುರ್ (೪೨), ನಾಗಣ್ಣ ಕೋರೆ (೬೩) ಹಾಗೂ ಬಾಬುರಾವ್ ಕೋರೆ (೭೮) ಅವರು ವಾದಿಗಳಾಗಿದ್ದು, ಕರ್ನಾಟಕ ಸರ್ಕಾರ (ಉಪ ಆಯುಕ್ತರ ಮೂಲಕ), ಆಳಂದ ತಹಶೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ವಾದಿಗಳು ತಮ್ಮ ದಾವೆಯಲ್ಲಿ, ವಿವಾದಿತ ಜಾಗವು ತಮ್ಮ ಸ್ವಾಧೀನದಲ್ಲಿರುವ ಕೃಷಿ ಭೂಮಿಯಾಗಿದ್ದು, ಕಾನೂನು ಪ್ರಕ್ರಿಯೆ ಅನುಸರಿಸದೆ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಯಾವುದೇ ರಸ್ತೆ ಅಥವಾ ಸಾರ್ವಜನಿಕ ಕಾಮಗಾರಿ ಕೈಗೊಳ್ಳದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಜೊತೆಗೆ ಈಗಾಗಲೇ ನಿರ್ಮಾಣ ಮಾಡಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಿ, ಹಾಕಿರುವ ಜಲ್ಲಿಕಲ್ಲು ಹಾಗೂ ಯಂತ್ರೋಪಕರಣಗಳನ್ನು ತೆರವುಗೊಳಿಸಿ ಜಮೀನನ್ನು ಮೊದಲಿನ ಕೃಷಿ ಭೂಮಿಯ ಸ್ಥಿತಿಗೆ ಮರುಸ್ಥಾಪಿಸುವಂತೆ ಕಡ್ಡಾಯ ತಡೆಯಾಜ್ಞೆಯನ್ನೂ ಕೋರಿದ್ದಾರೆ.
ಜುಲೈ ೯ರಂದು ನಡೆದ ವಿಚಾರಣೆಯಲ್ಲಿ ಪ್ರತಿವಾದಿಗಳ ಪರವಾಗಿ ವಕಾಲತ್ತು ಸಲ್ಲಿಕೆಯಾಗಿದ್ದು, ಲಿಖಿತ ಹೇಳಿಕೆ ಮತ್ತು ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಲಾಗಿತ್ತು. ನ್ಯಾಯಾಲಯವು ನ್ಯಾಯದ ಹಿತದೃಷ್ಟಿಯಿಂದ ಅವಕಾಶ ನೀಡಿ ಪ್ರಕರಣವನ್ನು ಜುಲೈ ೧೦ಕ್ಕೆ ಮುಂದೂಡಿತ್ತು.
ಜುಲೈ ೧೦ರಂದು ಮತ್ತೆ ವಿಚಾರಣೆ ನಡೆದಾಗ ಪ್ರತಿವಾದಿಗಳ ಪರ ವಕೀಲರು ಮತ್ತಷ್ಟು ಸಮಯ ಕೋರಿದರು. ಆದರೆ ವಾದಿ ಪರ ವಕೀಲರು ಪ್ರಕರಣವನ್ನು ಮುಂದುವರಿಸುವAತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ಸನ್ನಿವೇಶವನ್ನು ಪರಿಗಣಿಸಿ, ಪ್ರತಿವಾದಿಗಳು ಲಿಖಿತ ಹೇಳಿಕೆ ಹಾಗೂ ಆಕ್ಷೇಪಣೆ ಸಲ್ಲಿಸುವವರೆಗೆ ವಿವಾದಿತ ಜಾಗದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ ೧೫, ೨೦೨೬ಕ್ಕೆ ನಿಗದಿಪಡಿಸಲಾಗಿದ್ದು, ಅಂದು ಪ್ರತಿವಾದಿಗಳು ತಮ್ಮ ಲಿಖಿತ ಹೇಳಿಕೆ ಹಾಗೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಸ್ಥಳೀಯವಾಗಿ ಕುತೂಹಲಕ್ಕೆ ಕಾರಣವಾಗಿವೆ.
ಮಹೇಶ್ವರಿ ಎಸ್. ವಾಲಿ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿದ ಕಲಬುರಗಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ, ರೈತರ ಜಮೀನಿನ ಸ್ಥಳಕ್ಕೆ ತಾವು ಈ ಹಿಂದೆಯೇ ಭೇಟಿ ನೀಡಿ, ಶುಕ್ರವಾಡಿ ಹೊನ್ನಳ್ಳಿ ಗ್ರಾಮಕ್ಕೆ ರಸ್ತೆ ಆಗಲೇಬೇಕು ಎಂಬ ಬೇಡಿಕೆಯೂ ನಮ್ಮದಾಗಿದೆ. ರೈತರ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಕೈಗೊಳ್ಳಬಾರದು ಹಾಗೂ ಸರ್ಕಾರದ ಅನುಮೋದಿತ ನಕ್ಷೆ ಮತ್ತು ನಿಯಮಾವಳಿಯಂತೆ ಮಾತ್ರ ಕಾಮಗಾರಿ ನಡೆಸಬೇಕು ಎಂದು ತಾಲ್ಲೂಕು ಆಡಳಿತ ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದ್ದೆವು ಎಂದು ಹೇಳಿದರು.
“ಆದರೆ ನಮ್ಮ ಮನವಿ ಮತ್ತು ರೈತರ ಆಕ್ಷೇಪಣೆಗಳ ನಡುವೆಯೂ ರಸ್ತೆ ಕಾಮಗಾರಿ ಮುಂದುವರಿಸಲಾಗುತ್ತಿತ್ತು. ಇದರಿಂದ ರೈತರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದೀಗ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವುದು ನ್ಯಾಯದ ಪರವಾದ ಬೆಳವಣಿಗೆಯಾಗಿದೆ. ನ್ಯಾಯಾಲಯದ ಆದೇಶವನ್ನು ಎಲ್ಲ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದರು.
ತಹಸೀಲ್ದಾರ ಅಣ್ಣಾರಾವ್ ಪಾಟೀಲ ಪ್ರತಿಕ್ರಿಯೆ:
“ಹೊನ್ನಳ್ಳಿ–ಶುಕ್ರವಾಡಿ ರಸ್ತೆ ನಿರ್ಮಾಣ ಕಾಮಗಾರಿ ಸಂಬAಧ ನ್ಯಾಯಾಲಯವು ಸದ್ಯಕ್ಕೆ ಯಥಾಸ್ಥಿತಿ (ಸ್ಟೇಟಸ್ ಕ್ವೋ) ಕಾಯ್ದುಕೊಳ್ಳುವಂತೆ ಆದೇಶಿಸಿದೆ. ವಕೀಲರ ಮೂಲಕ ಲಿಖಿತ ಹೇಳಿಕೆ ಸಲ್ಲಿಕೆ ಹಾಗೂ ಮುಂದಿನ ಆದೇಶ ಬರುವವರೆಗೆ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುತ್ತದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುವ ಉದ್ದೇಶದಿಂದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈಗಾಗಲೇ ಇರುವ ರಸ್ತೆ ಮಾರ್ಗದಲ್ಲಿಯೇ ಕಾಮಗಾರಿ ನಡೆಸಲಾಗುತ್ತಿದೆ ಎಂಬುದು ನಮ್ಮ ನಿಲುವಾಗಿದೆ. ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ನ್ಯಾಯಾಲಯ ನೀಡುವ ಅಂತಿಮ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಎಂದು ತಹಸೀಲ್ದಾರ ಅಣ್ಣಾರಾವ್ ಪಾಟೀಲ ತಿಳಿಸಿದ್ದಾರೆ.