Shubhashaya News

ಹೊನ್ನಹಳ್ಳಿ–ಶುಕ್ರವಾಡಿ ರಸ್ತೆ ಕಾಮಗಾರಿ ವಿವಾದ ತೀವ್ರ

"ನಕ್ಷೆ ಬಿಟ್ಟು ರಸ್ತೆ ನಿರ್ಮಾಣವಾದರೆ ರಸ್ತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ" – ಸಂತ್ರಸ್ತ ರೈತರ ಎಚ್ಚರಿಕೆ

ಆಳಂದ: ಪಿಡಬ್ಲೂಡಿ ಇಲಾಖೆಯಿಂದ ಹೊನ್ನಳ್ಳಿ ಮತ್ತು ಶುಕ್ರವಾಡಿ ಗ್ರಾಮದ ಕೆಲವು ರೈತರ ಜಮೀನಿನಲ್ಲಿ ಅಕ್ರಮ ರಸ್ತೆ ಕೈಗೊಳ್ಳಲಾಗುತ್ತಿದೆ ಎಂದು ಸಂತ್ರಸ್ತ ರೈತರು ಮಹೇಶ್ವರಿ ವಾಲಿ ಅವರಿಗೆ ತೋರಿಸಿದರು.

ಆಳಂದ: ಹೊನ್ನಳಿ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಆಕ್ಷೇಪಿಸದ ರೈತರಿಗೆ ಬೆಂಬಲಿಸಿ ಮಹೇಶ್ವರಿ ಎಸ್. ವಾಲಿ ಅವರು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಜೊತೆ ಚರ್ಚಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಎಚ್ಚರಿಕೆ
ಆಳಂದ: ಹೊನ್ನಹಳ್ಳಿ–ಶುಕ್ರವಾಡಿ ರಸ್ತೆ ನಿರ್ಮಾಣ ಕಾಮಗಾರಿ ಗ್ರಾಮ ನಕ್ಷೆಯಂತೆ ನಡೆಯದೆ, ಕೆಲವು ರೈತರ ಜಮೀನಿನ ಮೇಲೆ ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತ ರೈತರು ಹಾಗೂ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಕಾಮಗಾರಿ ಸ್ಥಳದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಗ್ರಾಮ ನಕ್ಷೆಯಂತೆ ರಸ್ತೆ ನಿರ್ಮಿಸದಿದ್ದರೆ ರಸ್ತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಲ್ವರು ರೈತರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರ ಸ್ವರೂಪ ನೀಡಿದೆ. ಆದರು ಅಕ್ರಮ ಕಾಮಗಾರಿ ಮುಂದುವರೆಸಿರುವುದು ಸರಿಯಲ್ಲ ಎಂದು ವಾಲಿ ಅವರು ಆಕ್ಷೇಪಿಸಿದರು.
ಈ ಕುರಿತು ಗುರುವಾರ ತಹಸೀಲ್ದಾರ್ ಕಚೇರಿಗೆ ಸಂತ್ರಸ್ತ ರೈತ ಕುಟುಂಬದೊAದಿಗೆ ಭೇಟಿ ನೀಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಪ್ರಕರಣದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗಬೇಕು” ಎಂದು ಕಿಡಿಕಾರಿದರು.
ಅವರು ಮಾತನಾಡಿ, ಗ್ರಾಮ ನಕ್ಷೆಯಲ್ಲಿರುವ ರಸ್ತೆಯನ್ನು ನಿರ್ಮಿಸುವುದಕ್ಕೆ ಯಾರಿಗೂ ಯಾವುದೇ ವಿರೋಧವಿಲ್ಲ. ಆದರೆ ಈಗ ಅಧಿಕಾರಿಗಳು ಗ್ರಾಮ ನಕ್ಷೆಯಲ್ಲಿ ಇಲ್ಲದ ಮಾರ್ಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದು, ಇದರಿಂದ ಆಕ್ಷೇಪಿತರ ರೈತರ ಸುಮಾರು ೩.೨೦ ಎಕರೆ ಕೃಷಿ ಭೂಮಿ ನಷ್ಟವಾಗಲಿದೆ. ರೈತರ ಈ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದರು.
ಈ ಹಿಂದೆಯೂ ಇದೇ ರಸ್ತೆಯ ನಿರ್ಮಾಣವನ್ನು ಪ್ರಶ್ನಿಸಿ ರೈತರಾದ ಬಾಬು ಬಸಣ್ಣ ಕೋರೆ, ನಾಗಣ್ಣ ಬಸಣ್ಣ ಕೋರೆ ಸೇರಿದಂತೆ ನಾಲ್ವರು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ನ್ಯಾಯಾಲಯ ರೈತರ ಪರವಾಗಿ ಆದೇಶ ನೀಡಿದ್ದರೂ, ಅದನ್ನು ಅಧಿಕಾರಿಗಳು ಪರಿಗಣಿಸುತ್ತಿಲ್ಲ ಈಗ ಮತ್ತೆ ಕಾಮಗಾರಿ ಆರಂಭಿಸಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ತಾಲೂಕು ಆಡಳಿತ ಎರಡು ರೀತಿಯ ಗ್ರಾಮ ನಕ್ಷೆಗಳನ್ನು ತೋರಿಸುತ್ತಿದೆ ಎಂದು ಆರೋಪಿಸಿದ ಅವರು, ತಹಸೀಲ್ದಾರರನ್ನು ಪ್ರಶ್ನಿಸಿದಾಗ, “ಆಕ್ಷೇಪಿತ ರೈತರ ಸರ್ವೆ ನಂ. ೧೪ ರಲ್ಲಿ ಯಾವುದೇ ರಸ್ತೆ ಇಲ್ಲವೆ ಎಂದು ತಹಸೀಲ್ದಾರ ೧೧ ಜೂನ್ ೨೦೨೬ರ ನೀಡದ ಆದೇಶದಲ್ಲಿದೆ. ಆದರೆ ರಸ್ತೆ ಇಲ್ಲವೆಂದ ಮೇಲೆ ಈಗ ಅದೇ ಸ್ಥಳದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಯಾವ ಕಾನೂನಿನಡಿ ಎಂದು ಪ್ರಶ್ನಿಸಿದರು.
ಇದಲ್ಲದೆ, ಶಾಸಕರ ಬೆಂಬಲಿಗರು ಹಾಗೂ ಪೊಲೀಸರ ಸಹಾಯದಿಂದ ರೈತರ ಮೇಲೆ ಒತ್ತಡ ಹೇರಿ ರಸ್ತೆ ಕಾಮಗಾರಿ ಮುಂದುವರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಪೊಲೀಸ್ ಬಲದ ಮೂಲಕ ರೈತರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ವಾಲಿ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ನಡೆದ ವಾಲಿ ಅವರ ಚರ್ಚೆಯ ವೇಳೆ ಭೂಮಾಪಕರು ಹಾಗೂ ಕಂದಾಯ ಇಲಾಖೆ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರರು ತಿಳಿಸಿರುವುದಾಗಿ ಮಹೇಶ್ವರಿ ವಾಲಿ ಹೇಳಿದರು. ಹಿಂದಿನ ಗ್ರಾಮ ನಕ್ಷೆಯಲ್ಲಿ ರಸ್ತೆ ಇರಲಿಲ್ಲ. ಆದರೆ ಹಳೆಯ ಟಿಪ್ಪಣಿಗಳ ಪರಿಶೀಲನೆಯ ವೇಳೆ ರಸ್ತೆ ಇರುವ ದಾಖಲೆ ಕಂಡುಬAದ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಹಸೀಲ್ದಾರರು ಸಮರ್ಥಿಸಿಕೊಂಡಿದ್ದಾರೆ ಎಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಹೇಶ್ವರಿ ವಾಲಿ, “ಒಂದೇ ಗ್ರಾಮಕ್ಕೆ ಎರಡು ಗ್ರಾಮ ನಕ್ಷೆಗಳು ಹೇಗೆ ಸಾಧ್ಯ? ಸರ್ಕಾರದ ಅಧಿಕೃತ ದಾಖಲೆ ಒಂದೇ ಆಗಿರಬೇಕು. ಒಂದೇ ಪ್ರಕರಣಕ್ಕೆ ಎರಡು ವಿಭಿನ್ನ ದಾಖಲೆಗಳನ್ನು ತೋರಿಸುವುದು ಅನುಮಾನಗಳಿಗೆ ಕಾರಣವಾಗಿದೆ” ಎಂದು ಪ್ರಶ್ನಿಸಿದರು.
ರೈತರ ಜಮೀನಿನಲ್ಲಿ ಯಾವುದೇ ಪೂರ್ವ ನೋಟಿಸ್ ನೀಡದೆ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನುಬಾಹಿರ ಕ್ರಮವಾಗಿದೆ. ಹಿಂದೆ ನಡೆದ ಸರ್ವೆ ತಪ್ಪು, ಈಗಿನ ಸರ್ವೆ ಮಾತ್ರ ಸರಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಸಿವಿಲ್ ಸ್ವರೂಪದ ವಿವಾದಗಳಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಬಾರದು ಎಂಬ ನಿಯಮವಿದ್ದರೂ, ಈ ಪ್ರಕರಣದಲ್ಲಿ ಪೊಲೀಸರು ರೈತರು ಹಾಗೂ ರೈತ ಮಹಿಳೆಯರನ್ನು ಎಳೆದಾಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ನ್ಯಾಯಾಲಯದ ಆದೇಶವಿದ್ದರೂ ಅದನ್ನು ಅಧಿಕಾರಿಗಳು ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ರಸ್ತೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ಗ್ರಾಮ ನಕ್ಷೆ ಹಾಗೂ ಕಾನೂನು ಪ್ರಕಾರವೇ ಕಾಮಗಾರಿ ನಡೆಯಬೇಕು. ರೈತರ ಜಮೀನು ಕಬಳಿಸಿ, ಪೊಲೀಸ್ ಬಲ ಪ್ರಯೋಗಿಸಿ ರಸ್ತೆ ನಿರ್ಮಿಸಲು ಮುಂದಾದರೆ ಅದರ ವಿರುದ್ಧ ಕಾನೂನು ಹಾಗೂ ಜನಾಂದೋಲನದ ಮೂಲಕ ಹೋರಾಟ ನಡೆಸಲಾಗುವುದು ಎಂದು ಮಹೇಶ್ವರಿ ಎಸ್. ವಾಲಿ ಎಚ್ಚರಿಕೆ ನೀಡಿದರು.

Leave A Reply

Your email address will not be published.