ಆಳಂದ: ಸಿಯುಕೆ ಸಹ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಅವರ ಕಲ್ಲು ಹಾಗೂ ಕಟ್ಟಿಗೆ ಕೆತನೇಯ ಕಲಾಕೃತಿಗಳು.

ಆಳಂದ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಹಿರಿಯ ಕಲಾವಿದರಿಗೆ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಫೆಲೋಶಿಪ್ (೨೦೨೫–೨೬) ಪ್ರಶಸ್ತಿಗೆ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಾನಂದ ಬಂಟನೂರು ಅವರು “ಶಿಲ್ಪಕಲೆ” ವಿಭಾಗದಲ್ಲಿ ಆಯ್ಕೆಯಾಗಿದ್ದು, ಜೂನ್ ೧೫, ೨೦೨೬ರಂದು ಕೇಂದ್ರ ಸಂಸ್ಕೃತಿ ಸಚಿವಾಲಯವು ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದೆ.
ಕಲ್ಲು, ಕಟ್ಟಿಗೆ, ಲೋಹ ಸೇರಿದಂತೆ ವಿವಿಧ ಜಡ ವಸ್ತುಗಳಿಗೆ ಕಲೆಯ ಮೂಲಕ ಜೀವ ತುಂಬುವ ಅಪರೂಪದ ಶಿಲ್ಪಕಲಾ ಪ್ರತಿಭೆಯನ್ನು ಹೊಂದಿರುವ ಡಾ. ಶಿವಾನಂದ ಬಂಟನೂರು ಅವರು ತಮ್ಮ ಕಲಾಕೃತಿಗಳ ಮೂಲಕ ಸಮಾಜದ ವಾಸ್ತವತೆ, ಮಾನವೀಯ ಮೌಲ್ಯಗಳು, ಹಸಿವು, ನೋವು, ಅಸಮಾನತೆ, ಹೋರಾಟ ಹಾಗೂ ಬದುಕಿನ ಅನೇಕ ಆಯಾಮಗಳನ್ನು ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ. ಅವರ ಪ್ರತಿಯೊಂದು ಶಿಲ್ಪವೂ ಕೇವಲ ಕಲಾಕೃತಿಯಾಗದೆ, ಸಮಾಜವನ್ನು ಚಿಂತನೆಗೆ ಹಚ್ಚುವ ದೃಶ್ಯಕಾವ್ಯವಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ರಾಷ್ಟ್ರೀಯ ಫೆಲೋಶಿಪ್ ಅಡಿಯಲ್ಲಿ ಡಾ. ಬಂಟನೂರು ಅವರಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ೨೫ ಸಾವಿರ ಆರ್ಥಿಕ ನೆರವು ದೊರೆಯಲಿದ್ದು, ರಾಜ್ಯದ ಶಿಲ್ಪಕಲೆಯ ಸೃಷ್ಟಿ, ಸಂರಕ್ಷಣೆ, ದಾಖಲಾತಿ ಹಾಗೂ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಈ ಅನುದಾನ ಸಹಕಾರಿಯಾಗಲಿದೆ. ಫೆಲೋಶಿಪ್ ನಿಯಮಾನುಸಾರ ಪ್ರತಿ ಆರು ತಿಂಗಳಿಗೊಮ್ಮೆ ಶಿಲ್ಪಕಲೆ ಕುರಿತ ಸಂಶೋಧನಾ ಪ್ರಗತಿ ವರದಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಡಾ. ಶಿವಾನಂದ ಬಂಟನೂರು ತಿಳಿಸಿದ್ದಾರೆ.
ಡಾ. ಶಿವಾನಂದ ಬಂಟನೂರು ಅವರ ಕಲಾಸಾಧನೆ, ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ ವಿಸಾಜಿ, ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ಪ್ರಾಧ್ಯಾಪಕರು, ವಿವಿಧ ವಿಭಾಗಗಳ ಡೀನರು, ಸಂಶೋಧನಾ ವಿದ್ಯಾರ್ಥಿಗಳು, ಕಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಡಾ. ಶಿವಾನಂದ ಬಂಟನೂರು ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ.