ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಕಠಿಣ ಮಾರ್ಗಸೂಚಿಗಳನ್ನೊಳಗೊಂಡ ಸುತ್ತೋಲೆಯೊಂದನ್ನು ಹೊರಡಿಸಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರ ಸಹಿಯೊಂದಿಗೆ ಹೊರಬಿದ್ದಿರುವ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಶಾಲಾ ಸಮಯದಲ್ಲಿ ಶಿಕ್ಷಕರು ಹೊರಗಡೆ ಹೋಗುವಂತಿಲ್ಲ. pdftpp
ಶಿಕ್ಷಕರನ್ನು .ಆರ್_.ಪಿ ಗಳಾಗಿ ನಿಯೋಜಿಸದಿರುವ ಬಗ್ಗೆ ಶಾಲಾ ಸಮಯದಲ್ಲಿ ಶಿಕ್ಷಕರು ಹೊರಗಡೆ ಹೋಗುವಂತಿಲ್ಲ. pdftpp
ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತಿದಿನ ಶಾಲಾ ಹಂತದಲ್ಲಿ ನಿರಂತರ ಬೋಧನೆ ಮತ್ತು ಕಲಿಕೆ ನಡೆಯಬೇಕಿರುವುದು ಕಡ್ಡಾಯವಾಗಿದ್ದು, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶಾಲಾ ಅವಧಿಯಲ್ಲಿ ಸಂಪೂರ್ಣವಾಗಿ ಶಾಲೆಯಲ್ಲೇ ಹಾಜರಿರುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ದಿನಗಳಲ್ಲಿ ಮತ್ತು ಶಾಲಾ ಅವಧಿಯಲ್ಲಿ ಯಾವುದೇ ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರನ್ನು ಯಾವುದೇ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ, ಸಭೆ ಅಥವಾ ಇತರೆ ಚಟುವಟಿಕೆಗಳಿಗೆ ನಿಯೋಜಿಸುವಂತಿಲ್ಲ. ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಇವರನ್ನು ಹೊರಗೆ ಕಳುಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಸಹ ಇಂತಹ ಯಾವುದೇ ನಿರ್ದೇಶನಗಳನ್ನು ನೀಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೆ, ಶಾಲಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ಸಂಬಂಧಿಸಿದಂತೆ ಯಾವುದೇ ಸಭೆಗಳನ್ನು ಕರೆಯಬಾರದು ಅಥವಾ ವಿಡಿಯೋ ಕಾನ್ಫರೆನ್ಸ್ ನಡೆಸಬಾರದು ಎಂದು ಆದೇಶಿಸಲಾಗಿದೆ. ಶಾಲೆಗಳಿಗೆ ಭೇಟಿ ನೀಡುವ ಇಲಾಖೆಯ ಯಾವುದೇ ಅಧಿಕಾರಿಗಳು ಶಾಲೆಯ ತರಗತಿಗಳಿಗೆ ಮತ್ತು ಬೋಧನೆಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಇದರೊಂದಿಗೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗಡೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಭಾಗವಹಿಸಲು ಕರೆದುಕೊಂಡು ಹೋಗಲು ಇನ್ಮುಂದೆ ನಿರ್ದೇಶಿಸುವಂತಿಲ್ಲ.
ಶಾಲೆಗಳ ದುರುಪಯೋಗವನ್ನು ತಡೆಯಲು ಬಾಹ್ಯ ಪರೀಕ್ಷೆಗಳಿಗೂ ಇಲಾಖೆ ಬ್ರೇಕ್ ಹಾಕಿದೆ. ಶಾಲಾ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಅಥವಾ ಇತರೆ ಯಾವುದೇ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನಡೆಸುವ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣದಲ್ಲಿ ನಡೆಸುವಂತಿಲ್ಲ. ಇಂತಹ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕಾದಲ್ಲಿ, ಕೇವಲ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಸಮಯದಲ್ಲಿ ಮಾತ್ರ ನಿಯಮಾನುಸಾರ ನೀಡಬೇಕಾಗುತ್ತದೆ. ಒಂದು ವೇಳೆ ಈ ನಿಬಂಧನೆಯನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು ಹಾಗೂ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಶಿಕ್ಷಕರನ್ನು ಬೋಧನೇತರ ಕೆಲಸಗಳಿಗೆ ಬಳಸಿಕೊಳ್ಳುವುದಕ್ಕೂ ಹೊಸ ಆದೇಶದಲ್ಲಿ ಮುಕ್ತಿ ನೀಡಲಾಗಿದೆ. ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಜ್ಞಾನ ಪಾಲುದಾರರ ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು ಮೌಖಿಕ ಅಥವಾ ಲಿಖಿತ ಆದೇಶ ನೀಡಬಾರದು. ಈ ನಿಯಮವನ್ನು ಮೀರಿ ಆದೇಶ ನೀಡುವ ಯಾವುದೇ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.