ಆಳಂದ ತಾಲೂಕಿನಲ್ಲಿ ಶಿರಪೂರ ಮಾದರಿ ಯೋಜನೆ ಯಶಸ್ವಿಯಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ ಅವರ ಬೆಂಬಲಿಗರು ನೀಡುತ್ತಿರುವ ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದು, ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಆಳಂದ ತಾಲೂಕಿನ ರೈತ ಮುಖಂಡರು ಆರೋಪಿಸಿದ್ದಾರೆ.
ಮಂಗಳವಾರ ಕಲಬುರಗಿಯ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೇ ಟಾಸ್ಕ್ ಫೋರ್ಸ ಸಮಿತಿಯಲ್ಲಿ ಕುಡಿಯುವ ನೀರಿನ ಚರ್ಚೆಯಾಗಿದ್ದೇಕೆ?. ಶಾಸಕರು ಪಿಡಿಒಗಳ ಮೇಲೆ ಆಪಾದನೆ ಮಾಡಿದ್ದೇಕೆ?. ರಾಜ್ಯ ಸರ್ಕಾರ ಕೇವಲ ೪೫ ಕೋಟಿ ಬಿಡುಗಡೆ ಮಾಡಿದಾಗ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ತಪ್ಪೇ?. ೪.೩೭ ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಟ್ಟಿದ್ದು ಯಾಕಾಗಿ?. ಭೀಮಾ ನದಿಯಲ್ಲಿ ನೀರಿಲ್ಲ ನಾರಾಯಣಪೂರ ಕಾಲುವೆಯಿಂದ ನೀರು ಬಿಡುಗಡೆ ಮಾಡಿ ಎಂದು ಹೇಳಿರುವುದು ಯಾತಕ್ಕಾಗಿ?. ಶಾಸಕರ ಸ್ವಗ್ರಾಮ ಸರಸಂಬಾದಲ್ಲಿ ಹತ್ತು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ ಇದರ ಜಿಪಿಎಸ್ ಫೋಟೊ ಹಾಕಲಾಗಿದೆ. ವಾಸ್ತವ ಅಂಶ ಮುಚ್ಚಿಟ್ಟು ಜನರಿಗೆ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಬೇಕು( ಇದಕ್ಕೆ ಶಾಸಕರೇ ಹೇಳಿರುವ ಹೇಳಿಕೆಗಳ ಪ್ರತಿ ಲಗತ್ತಿಸಲಾಗಿದೆ) ಎಂದು ತಿಳಿಸಿದ್ದಾರೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಂತರ್ಜಲ ಮಟ್ಟದಲ್ಲಿ ನಿರೀಕ್ಷಿತ ಪ್ರಮಾಣದ ಏರಿಕೆ ಕಂಡುಬAದಿಲ್ಲ. ಶಿರಪೂರ ಮಾದರಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ಅದರ ಪರಿಣಾಮ ಜನಜೀವನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಆಪಾದಿಸಿದರು.
ಬೇಸಿಗೆ ಆರಂಭವಾದಾಗಲೇ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ, ಶಾಶ್ವತ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ಶಿರಪೂರ ಮಾದರಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಪ್ರಚಾರ ಮಾಡುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾಗಿದೆ. ತಾಲೂಕಿನ ನೀರಿನ ಸಮಸ್ಯೆಗಳ ಕುರಿತು ವಾಸ್ತವಿಕ ಅಧ್ಯಯನ ನಡೆಸಿ, ಸಾರ್ವಜನಿಕರ ಮುಂದೆ ನಿಖರ ಮಾಹಿತಿ ಇಡಬೇಕೇ ಹೊರತು ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ನಡೆಸಬಾರದು ಎಂದು ಹೇಳಿದ್ದಾರೆ.
ಶಿರಪೂರ ಮಾದರಿಯಡಿ ಕೈಗೊಂಡ ಕಾಮಗಾರಿಗಳ ಕುರಿತು ಸ್ವತಂತ್ರ ತಾಂತ್ರಿಕ ಸಮಿತಿಯಿಂದ ಪರಿಶೀಲನೆ ನಡೆಸಿ, ವೆಚ್ಚ ಹಾಗೂ ಫಲಿತಾಂಶಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ವಾಸ್ತವಾಂಶಗಳ ಆಧಾರದ ಮೇಲೆ ಮಾತನಾಡಬೇಕು. ಜನರಿಗೆ ತಪ್ಪು ಮಾಹಿತಿ ನೀಡುವ ಬದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಶಿರಪೂರ ಮಾದರಿ ಕಾಮಗಾರಿ ಬಗ್ಗೆ ಹಾಗೂ ಅದಕ್ಕೆ ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಕೇಳಿದರೂ ಅಧಿಕಾರಿಗಳು ಇಲ್ಲಿಯವರೆಗೆ ಉತ್ತರಿಸಿಲ್ಲ, ಅದರ ವಿರುದ್ಧ ಪ್ರಥಮ ಮೇಲ್ಮನವಿ ಹಾಕಿದರೂ ಉತ್ತರ ನೀಡಿಲ್ಲ ಈಗ ಸಧ್ಯ ಈ ವಿಚಾರವನ್ನು ಮಾಹಿತಿ ಹಕ್ಕು ಆಯೋಗದಲ್ಲಿ ಪ್ರಶ್ನಿಸಲಾಗಿದೆ( ಅದರ ಪ್ರತಿಗಳು ಲಗತ್ತಿಸಲಾಗಿದೆ) ಎಂದು ದಾಖಲೆ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಶಾಸ್ತಿçÃ, ಯುವರಾಜ ಪರತಾಪೂರೆ, ಸುರೇಶ ಕದರಗೆ, ಸಿದ್ದಾರೂಢ ಸಮತಾಜೀವನ, ಈರಣ್ಣ ಮುಗಳೆ, ಪ್ರಭುಲಿಂಗ ಹಳ್ಳೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.