Shubhashaya News

ಉದ್ಯಮ–ಶಿಕ್ಷಣ ಅಂತರ ನಿವಾರಣೆಗೆ ಆಮೂಲಾಗ್ರ ಶಿಕ್ಷಣ ಸುಧಾರಣೆ ಅಗತ್ಯ: ಡಿಸಿಎಂ ಡಾ. ಜಿ. ಪರಮೇಶ್ವರ

"ಪದವಿ ಮಾತ್ರ ಸಾಲದು; ಕೌಶಲ್ಯವೇ ಭವಿಷ್ಯದ ಬುನಾದಿ"

ಆಳಂದ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರೊಂದಿಗೆ ಅಪ್‌ಗ್ರೇಡ್ ಸ್ಕೂಲ್ ಆಫ್ ಟೆಕ್ನಾಲಜಿಯ ಸಂಸ್ಥಾಪಕ ಹಾಗೂ ಸಿಇಒ ವಿಶ್ವ ಮೋಹನ್ ನಡೆಸಿದ ವಿಶೇಷ ಪಾಡ್‌ಕಾಸ್ಟ್ ಸಂವಾದ ಸಂಗ್ರಹ ಚಿತ್ರ.

ಆಳಂದ: ಭಾರತದಲ್ಲಿ ಪ್ರತಿವರ್ಷ ೧೫ ಲಕ್ಷಕ್ಕೂ ಹೆಚ್ಚು ಇಂಜಿನಿಯರಿAಗ್ ಪದವೀಧರರು ಹೊರಬರುತ್ತಿದ್ದರೂ, ಉದ್ಯಮಗಳಿಗೆ ಅಗತ್ಯವಿರುವ ಕೌಶಲ್ಯ ಹೊಂದಿರುವ ಪದವೀಧರರ ಸಂಖ್ಯೆ ಕಡಿಮೆಯಿರುವುದು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಎದುರಿನ ಅತ್ಯಂತ ಗಂಭೀರ ಸವಾಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.
ಅಪ್‌ಗ್ರೇಡ್ ಸ್ಕೂಲ್ ಆಫ್ ಟೆಕ್ನಾಲಜಿಯ ಸಂಸ್ಥಾಪಕ ಹಾಗೂ ಸಿಇಒ ವಿಶ್ವ ಮೋಹನ್ ನಡೆಸಿದ ವಿಶೇಷ ಪಾಡ್‌ಕಾಸ್ಟ್ ಸಂವಾದದಲ್ಲಿ ಅವರು ಶಿಕ್ಷಣ, ಉದ್ಯೋಗಾರ್ಹತೆ, ಕೃತಕ ಬುದ್ಧಿಮತ್ತೆ (ಎಐ), ಕೌಶಲ್ಯಾಭಿವೃದ್ಧಿ, ಸಂಶೋಧನೆ, ಸ್ಟಾರ್ಟ್ಅಪ್ ಸಂಸ್ಕೃತಿ ಹಾಗೂ ಯುವಜನರ ಭವಿಷ್ಯದ ಕುರಿತು ದೂರದೃಷ್ಟಿಯ ಅಭಿಪ್ರಾಯಗಳನ್ನು ಹಂಚಿಕೊAಡಿದ್ದಾರೆ.
ಈ ಸಂವಾದವು ಭಾರತದ ಶಿಕ್ಷಣ ವ್ಯವಸ್ಥೆಯ ದಿಕ್ಕು, ಗುಣಮಟ್ಟ ಮತ್ತು ಭವಿಷ್ಯದ ಕುರಿತು ಮಹತ್ವದ ಚರ್ಚೆಗೆ ವೇದಿಕೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳಿತು.
ಸಂಭಾಷಣೆಯ ಆರಂಭದಲ್ಲಿ ವಿಶ್ವ ಮೋಹನ್, ಆಸ್ಟ್ರೇಲಿಯಾದ ಪ್ರತಿಷ್ಠಿತ ವೈಟ್ ಇನ್‌ಸ್ಟಿಟ್ಯೂಟ್‌ಚ ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿ ಅಲ್ಲಿಯೇ ಉತ್ತಮ ಅವಕಾಶಗಳಿದ್ದರೂ ಭಾರತಕ್ಕೆ ಮರಳಲು ಕಾರಣವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಾ. ಪರಮೇಶ್ವರ, ತಮ್ಮ ತಂದೆಯವರು ಶಿಕ್ಷಣದ ಮೂಲಕ ಗ್ರಾಮೀಣ ಮಕ್ಕಳ ಬದುಕು ರೂಪಿಸಬೇಕೆಂಬ ಕನಸು ಕಂಡಿದ್ದರು. ಅವರು ಸ್ಥಾಪಿಸಿದ್ದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಜವಾಬ್ದಾರಿ ಹಾಗೂ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ “ನವ ಭಾರತ” ನಿರ್ಮಾಣದ ಕರೆಗೆ ಸ್ಪಂದಿಸಿದ ಪರಿಣಾಮ ತಾವು ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟೆ ಎಂದು ತಿಳಿಸಿದರು.
ಭಾರತದಲ್ಲಿ ಲಕ್ಷಾಂತರ ಇಂಜಿನಿಯರ್‌ಗಳು ಪದವಿ ಪಡೆದರೂ ಉದ್ಯೋಗ ಸಮಸ್ಯೆ ಏಕೆ ಮುಂದುವರಿದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಮತ್ತು ಉದ್ಯಮದ ಅಗತ್ಯಗಳ ನಡುವೆ ದೊಡ್ಡ ಅಂತರವಿದೆ ಎಂದು ಸ್ಪಷ್ಟಪಡಿಸಿದರು.
“ಇಂದಿಗೂ ಅನೇಕ ವಿಶ್ವವಿದ್ಯಾಲಯಗಳಲ್ಲಿ ಹತ್ತು ವರ್ಷಗಳಷ್ಟು ಹಳೆಯ ಪಠ್ಯಕ್ರಮವೇ ಬೋಧನೆಯಾಗುತ್ತಿದೆ. ಆದರೆ ತಂತ್ರಜ್ಞಾನ ಪ್ರತಿದಿನ ಹೊಸ ರೂಪ ಪಡೆಯುತ್ತಿದೆ. ಪರಿಣಾಮವಾಗಿ ಕಂಪನಿಗಳು ನೇಮಕಗೊಂಡ ಇಂಜಿನಿಯರ್‌ಗಳಿಗೆ ಮತ್ತೊಮ್ಮೆ ಒಂದು ಅಥವಾ ಎರಡು ವರ್ಷಗಳ ಕಾಲ ತರಬೇತಿ ನೀಡಬೇಕಾಗುತ್ತದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿರುವ ದೌರ್ಬಲ್ಯದ ಸ್ಪಷ್ಟ ಸೂಚನೆ,” ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಹಾಗೂ ಡಿಜಿಟಲ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಪದವಿಯ ಕೊನೆಯ ವರ್ಷದಲ್ಲಿ ಉದ್ಯೋಗ ತರಬೇತಿ ಪಡೆಯುವುದಕ್ಕಿಂತ, ಮೊದಲ ಸೆಮಿಸ್ಟರ್‌ನಿಂದಲೇ ಕೋಡಿಂಗ್, ಸಮಸ್ಯೆ ಪರಿಹಾರ ಕೌಶಲ್ಯ, ತಂಡದ ಕೆಲಸ ಹಾಗೂ ಪ್ರಾಯೋಗಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ಕೇವಲ ಪದವಿ ಅಥವಾ ಪ್ರಮಾಣಪತ್ರ ಯಶಸ್ಸಿನ ಮಾನದಂಡವಲ್ಲ. ಉದ್ಯಮಕ್ಕೆ ಸಿದ್ಧವಾಗಿರುವ ಕೌಶಲ್ಯಯುತ ವೃತ್ತಿಪರರಾಗಬೇಕು. ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಸಂಶೋಧನೆ, ನಾವೀನ್ಯತೆ ಮತ್ತು ಸ್ಟಾರ್ಟ್ಅಪ್ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಭಾರತ ಜಾಗತಿಕ ಜ್ಞಾನ ಆರ್ಥಿಕತೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯ,” ಎಂದು ಕರೆ ನೀಡಿದರು.
ತುಮಕೂರಿನ ಶ್ರೀ ಸಿದ್ಧಾರ್ಥ ವಿಶ್ವವಿದ್ಯಾಲಯ ಹಾಗೂ ಅಪ್‌ಗ್ರೇಡ್ ಸ್ಕೂಲ್ ಆಫ್ ಟೆಕ್ನಾಲಜಿ ನಡುವಿನ ಶೈಕ್ಷಣಿಕ ಸಹಭಾಗಿತ್ವವೂ ಇದೇ ಉದ್ದೇಶದಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಅವರನ್ನು ಉದ್ಯಮಕ್ಕೆ ಸಿದ್ಧಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಅವಕಾಶಗಳನ್ನು ತಲುಪಿಸುವುದೇ ಈ ಸಹಯೋಗದ ಪ್ರಮುಖ ಗುರಿಯಾಗಿದೆ ಎಂದರು.
ಯುವಜನತೆಗೆ ಸಂದೇಶ ನೀಡಿದ ಡಾ. ಪರಮೇಶ್ವರ, “ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಸವಾಲನ್ನೂ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಿ. ನಿರಂತರ ಕಲಿಕೆ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಕೌಶಲ್ಯಾಭಿವೃದ್ಧಿಯೇ ಯಶಸ್ಸಿನ ನಿಜವಾದ ದಾರಿ. ಆಗ ಮಾತ್ರ ಭಾರತೀಯ ಯುವಶಕ್ತಿ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು,” ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅಪ್‌ಗ್ರೇಡ್ ಸ್ಕೂಲ್ ಆಫ್ ಟೆಕ್ನಾಲಜಿಯ ಸಂಸ್ಥಾಪಕ ಹಾಗೂ ಸಿಇಒ ವಿಶ್ವ ಮೋಹನ್, “ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಶಿಕ್ಷಣ ಮಾದರಿಯೇ ದೇಶದ ಭವಿಷ್ಯವನ್ನು ರೂಪಿಸಲಿದೆ. ವಿದ್ಯಾರ್ಥಿಗಳು ಮೊದಲ ದಿನದಿಂದಲೇ ಉದ್ಯೋಗ ಮತ್ತು ಉದ್ಯಮಕ್ಕೆ ಸಿದ್ಧರಾಗುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು,” ಎಂದು ಅಭಿಪ್ರಾಯಪಟ್ಟರು.
ಬಿಹಾರದ ಹಳ್ಳಿಯಿಂದ ಜಾಗತಿಕ ತಂತ್ರಜ್ಞಾನ ಕ್ಷೇತ್ರದವರೆಗೆ:
ವಿಶ್ವ ಮೋಹನ್ ಪ್ರೇರಣಾದಾಯಕ ಪಯಣ:
ಸಂವಾದದ ಆರಂಭದಲ್ಲಿ ತಮ್ಮ ಬದುಕಿನ ಪಯಣವನ್ನು ಹಂಚಿಕೊAಡ ವಿಶ್ವ ಮೋಹನ್, “ನಾನು ಬಿಹಾರದ ಒಂದು ಸಣ್ಣ ಹಳ್ಳಿಯಿಂದ ಬಂದವನು. ನಮ್ಮ ಕುಟುಂಬದಲ್ಲಿ ಶಿಕ್ಷಣವೇ ಜೀವನ ಬದಲಿಸುವ ಏಕೈಕ ಮಾರ್ಗ ಎಂಬ ನಂಬಿಕೆ ಇತ್ತು. ಶಿಕ್ಷಣವೇ ನನಗೆ ಆತ್ಮವಿಶ್ವಾಸ ನೀಡಿತು; ಅದೇ ನನ್ನನ್ನು ಐಐಟಿ ಮೂಲಕ ಜಾಗತಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಂಡೊಯ್ದಿತು,” ಎಂದು ಹೇಳಿದರು.
ವಿದೇಶದಲ್ಲಿ ಅತ್ಯುನ್ನತ ವೇತನದ ಉದ್ಯೋಗದಲ್ಲಿದ್ದರೂ ಭಾರತಕ್ಕೆ ಮರಳಿದ ಕಾರಣವನ್ನು ವಿವರಿಸಿದ ಅವರು, “ವಿದೇಶದಲ್ಲಿ ಹಣ ಸಂಪಾದಿಸುವುದಕ್ಕಿAತ ಭಾರತದ ಸ್ಟಾರ್ಟ್ಅಪ್ ಕ್ರಾಂತಿಯ ಭಾಗವಾಗುವುದು ನನಗೆ ಮುಖ್ಯವೆನಿಸಿತು. ದೇಶ ಹೊಸ ತಂತ್ರಜ್ಞಾನ ಯುಗದತ್ತ ಸಾಗುತ್ತಿದ್ದಾಗ ಅದರ ನಿರ್ಮಾಣದಲ್ಲಿ ನನ್ನ ಪಾತ್ರ ಇರಬೇಕು ಎಂದು ನಿರ್ಧರಿಸಿದೆ,”
“ನಾನು ಗಳಿಸಿದ ಎಲ್ಲ ಆತ್ಮವಿಶ್ವಾಸ ಶಿಕ್ಷಣ ನೀಡಿದ್ದು. ಅದೇ ಶಿಕ್ಷಣ ಬಿಹಾರದ ವಿದ್ಯಾರ್ಥಿಗೂ ಸಿಗಬಹುದು, ದೇಶದ ಯಾವುದೇ ಹಳ್ಳಿಯ ಅಥವಾ ನಗರದ ವಿದ್ಯಾರ್ಥಿಗೂ ಸಿಗಬಹುದು ಎಂದು ಹೇಳಿಕೊಂಡಿದ್ದಾರೆ.
ಈ ಒಂದು ವಾಕ್ಯದಲ್ಲೇ ಅವರ ಶಿಕ್ಷಣ ತತ್ವ ಅಡಗಿದೆ. ಬಿಹಾರದ ಹಳ್ಳಿಯಿಂದ ಆರಂಭವಾದ ಅವರ ಪಯಣ, ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಅನುಭವ, ಬಳಿಕ ಭಾರತಕ್ಕೆ ಮರಳಿ ಅಪ್‌ಗ್ರೇಡ್ ಸ್ಕೂಲ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಿರುವ ಉದ್ದೇಶ—ಇವೆಲ್ಲವೂ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ತಂತ್ರಜ್ಞಾನ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಸಂಕಲ್ಪದ ಪ್ರತೀಕವಾಗಿದೆ. ತುಮಕೂರು, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವುದೇ ತಮ್ಮ ಧ್ಯೇಯ ಎಂದು ಅವರು ತಿಳಿಸಿದರು.

Leave A Reply

Your email address will not be published.