Shubhashaya News

ಮೊಬೈಲ್ ಬಳಕೆದಾರರೇ ಎಚ್ಚರ : ಶೇ.99% ಜನ ಚಾರ್ಜಿಂಗ್ ವೇಳೆ ಮಾಡುತ್ತಿರುವ ಈ ತಪ್ಪು ಬ್ಯಾಟರಿ ಹಾಳು ಮಾಡುತ್ತಿದೆ.!

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ ಫೋನ್ ಸಾಮಾನ್ಯವಾಗಿದೆ. ಆದರೆ, ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಅದನ್ನು ಸರಿಯಾದ ಕ್ರಮದಲ್ಲಿ ಚಾರ್ಜ್ ಮಾಡುವುದು ಹೇಗೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ ಫೋನ್‌ ಗಳು ಲಿಥಿಯಂ-ಅಯಾನ್ (Lithium-ion) ಬ್ಯಾಟರಿಗಳೊಂದಿಗೆ ಬರುತ್ತಿವೆ. ಹಳೆಯ ಕಾಲದ ಫೋನ್‌ಗಳಂತೆ ಇವುಗಳನ್ನು ಸಂಪೂರ್ಣವಾಗಿ 0 ಪ್ರತಿಶತದವರೆಗೆ ಬಳಸಿ, ನಂತರ 100 ಪ್ರತಿಶತದವರೆಗೆ ಚಾರ್ಜ್ ಮಾಡಬಾರದು ಎಂದು ತಂತ್ರಜ್ಞಾನ ತಜ್ಞರು ಬಲವಾಗಿ ಎಚ್ಚರಿಸಿದ್ದಾರೆ.

ಬ್ಯಾಟರಿ ಲೈಫ್ ಅನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಅತ್ಯಂತ ಸುರಕ್ಷಿತವಾದ ‘ಗೋಲ್ಡನ್ ರೇಂಜ್’ ಎಂದರೆ ಅದು ಶೇ. 20 ರಿಂದ ಶೇ. 80 ರ ನಡುವೆ ಮಾತ್ರ. ಅಂದರೆ, ನಿಮ್ಮ ಫೋನ್ ಬ್ಯಾಟರಿ ಶೇ. 20 ಕ್ಕೆ ಇಳಿದಾಗ ಚಾರ್ಜರ್‌ಗೆ ಕನೆಕ್ಟ್ ಮಾಡುವುದು ಮತ್ತು ಶೇ. 80 ಅಥವಾ 85 ಕ್ಕೆ ತಲುಪಿದ ತಕ್ಷಣ ಪ್ಲಗ್ ಇನ್ ತೆಗೆಯುವುದು ಬ್ಯಾಟರಿಯ ಆಯಸ್ಸನ್ನು ಹೆಚ್ಚಿಸುತ್ತದೆ.

ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬಹುದು?

ಫೋನ್‌ ಅನ್ನು ದಿನಕ್ಕೆ ಇಷ್ಟೇ ಬಾರಿ ಚಾರ್ಜ್ ಮಾಡಬೇಕೆಂಬ ಯಾವುದೇ ಕಠಿಣ ನಿಯಮಗಳಿಲ್ಲ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ ಎಂಬುದು ಕೇವಲ ಭ್ರಮೆಯಷ್ಟೇ. ವಾಸ್ತವವಾಗಿ, ಒಂದೇ ಬಾರಿಗೆ 0 ಇಂದ 100 ಪ್ರತಿಶತದವರೆಗೆ ದೀರ್ಘವಾಗಿ ಚಾರ್ಜ್ ಮಾಡುವುದಕ್ಕಿಂತ, ಅಗತ್ಯವಿದ್ದಾಗ ದಿನಕ್ಕೆ 2 ರಿಂದ 3 ಬಾರಿ ಸ್ವಲ್ಪ ಸ್ವಲ್ಪವೇ ‘ಟಾಪ್-ಅಪ್’ ಚಾರ್ಜ್ ಮಾಡುವುದು ಬ್ಯಾಟರಿಗೆ ತುಂಬಾ ಒಳ್ಳೆಯದು. ಇದು ಬ್ಯಾಟರಿಯ ಮೇಲಿನ ಹೆಚ್ಚುವರಿ ವೋಲ್ಟೇಜ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಚಾರ್ಜಿಂಗ್ ಸೈಕಲ್ ರಹಸ್ಯ ಇಲ್ಲಿದೆ:
ಸ್ಮಾರ್ಟ್‌ ಫೋನ್ ಬ್ಯಾಟರಿ ಲೈಫ್ ಅದರ ಚಾರ್ಜಿಂಗ್ ಸೈಕಲ್ಸ್ (Charging Cycles) ಮೇಲೆ ಆಧಾರಿತವಾಗಿರುತ್ತದೆ. ಸಾಮಾನ್ಯವಾಗಿ ಒಂದು ಮೊಬೈಲ್ ಬ್ಯಾಟರಿ 300 ರಿಂದ 500 ಪೂರ್ಣ ಚಾರ್ಜಿಂಗ್ ಸೈಕಲ್‌ಗಳವರೆಗೆ ತನ್ನ ಗರಿಷ್ಠ ಸಾಮರ್ಥ್ಯವನ್ನು ಉಳಿಸಿಕೊಳ್ಳಬಲ್ಲದು. ಫೋನ್‌ ಅನ್ನು 0 ಇಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಿದರೆ ಅದನ್ನು ಒಂದು ‘ಪೂರ್ಣ ಸೈಕಲ್’ ಎಂದು ಪರಿಗಣಿಸಲಾಗುತ್ತದೆ. ಅದೇ ನೀವು ನಿಮ್ಮ ಫೋನ್‌ ಅನ್ನು ಯಾವಾಗಲೂ ಶೇ. 40 ರಿಂದ ಶೇ. 80 ರ ನಡುವೆ ಇಡುತ್ತಾ ಎರಡು ಬಾರಿ ಚಾರ್ಜ್ ಮಾಡಿದರೆ, ಅದು ಕೇವಲ ‘ಅರ್ಧ ಸೈಕಲ್’ ಆಗಿ ಮಾತ್ರ ಲೆಕ್ಕಿಸಲ್ಪಡುತ್ತದೆ. ಇದರಿಂದ ಬ್ಯಾಟರಿ ಲೈಫ್ ದುಪ್ಪಟ್ಟಾಗುತ್ತದೆ.

ಈ ಹಳೆಯ ನಂಬಿಕೆಗಳನ್ನು ಕೈಬಿಡಿ:
8 ಗಂಟೆಗಳ ಚಾರ್ಜಿಂಗ್ ಅಗತ್ಯವಿಲ್ಲ: ಹೊಸ ಫೋನ್ ಕೊಂಡಾಗ ಮೊದಲ ಬಾರಿ ಬಳಸುವ ಮುನ್ನ ಕಡ್ಡಾಯವಾಗಿ 8 ಗಂಟೆಗಳ ಕಾಲ ಚಾರ್ಜ್ ಮಾಡಬೇಕೆಂಬ ಹಳೆಯ ನಂಬಿಕೆಯನ್ನು ಬಿಟ್ಟುಬಿಡಿ. ಅಂದು ಬಳಸುತ್ತಿದ್ದ ನಿಕಲ್ ಆಧಾರಿತ ಬ್ಯಾಟರಿಗಳಿಗೆ ಆ ನಿಯಮವಿತ್ತು. ಆದರೆ ಇಂದಿನ ಲಿಥಿಯಂ ಬ್ಯಾಟರಿಗಳಿಗೆ ಇದರ ಅಗತ್ಯವಿಲ್ಲ. ಬಾಕ್ಸ್‌ನಿಂದ ತೆಗೆದ ತಕ್ಷಣ ಎಷ್ಟಿರುತ್ತದೆಯೋ ಅಷ್ಟರಲ್ಲೇ ನೇರವಾಗಿ ಬಳಸಬಹುದು.

ರಾತ್ರಿಯಿಡೀ ಚಾರ್ಜ್ ಮಾಡಬೇಡಿ: ಇಂದಿನ ಫೋನ್‌ಗಳಲ್ಲಿ ಆಟೋ-ಕಟಾಫ್ (Auto-cutoff) ಫೀಚರ್ ಇದ್ದಾಗ್ಯೂ, 100 ಪ್ರತಿಶತ ತಲುಪಿದ ನಂತರವೂ ಗಂಟೆಗಟ್ಟಲೆ ಪ್ಲಗ್‌ನಲ್ಲೇ ಬಿಡುವುದರಿಂದ ಬ್ಯಾಟರಿಯ ಕೆಮಿಸ್ಟ್ರಿ ದೆಬ್ಬೆ ತಿನ್ನುತ್ತದೆ. ಆದ್ದರಿಂದ ರಾತ್ರಿಯಿಡೀ ಚಾರ್ಜ್ ಕನೆಕ್ಟ್ ಮಾಡುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.

ಒರಿಜಿನಲ್ ಚಾರ್ಜರ್ ಮಾತ್ರ ಬಳಸಿ:
ಫೋನ್ ಚಾರ್ಜ್ ಮಾಡಲು ಯಾವಾಗಲೂ ಮೊಬೈಲ್ ಜೊತೆಗೆ ಬಂದ ಒರಿಜಿನಲ್ ಚಾರ್ಜರ್ ಅಥವಾ ಮಾನ್ಯತೆ ಪಡೆದ ಬ್ರ್ಯಾಂಡ್‌ಗಳ ಪ್ರಮಾಣೀಕೃತ (Certified) ಚಾರ್ಜರ್‌ಗಳನ್ನು ಮಾತ್ರ ಬಳಸಿ. ಕಡಿಮೆ ಬೆಲೆಗೆ ಸಿಗುವ ಸ್ಥಳೀಯ ಮತ್ತು ಕಳಪೆ ಗುಣಮಟ್ಟದ ಚಾರ್ಜರ್‌ಗಳು ಸ್ಥಿರವಾದ ವೋಲ್ಟೇಜ್ ನೀಡಲು ಸಾಧ್ಯವಿಲ್ಲ. ಇದರಿಂದ ಫೋನ್ ವಿಪರೀತವಾಗಿ ಕಾಯುತ್ತದೆ (Heat ಆಗುತ್ತದೆ). ಲಿಥಿಯಂ ಬ್ಯಾಟರಿಗಳಿಗೆ ಅತಿ ದೊಡ್ಡ ಶತ್ರು ಎಂದರೆ ಈ ಶಾಖ ಮಾತ್ರ. ಆದ್ದರಿಂದ ಈ ಇಂದೇ ಸ್ಮಾರ್ಟ್ ಚಾರ್ಜಿಂಗ್ ಅಭ್ಯಾಸಗಳನ್ನು ರೂಢಿಸಿಕೊಂಡು, ನಿಮ್ಮ ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಿ.

Leave A Reply

Your email address will not be published.