ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಆರೋಗ್ಯ ಇಲಾಖೆಯ ರಾಜಕುಮಾರ ಬಾಳಿ ಅವರನ್ನು ಕುಲಪತಿಗಳು ಗೌರವಿಸಿದರು. ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಇತರರು ಇದ್ದರು.
ಆಳಂದ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆಯಲ್ಲಿ) ೧೨ನೇ ಅಂತರರಾಷ್ಟ್ರೀಯ ಯೋಗ ದಿನವನ್ನು “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದಡಿ ವಿ.ವಿ.ಯ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಯೋಗಭ್ಯಾಸವು ನಮ್ಮ ದೈನಂದಿನ ದೈಹಿಕ ಸದೃಢತೆ, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಹಾಗೂ ಮನಸ್ಸಿನ ಆಂತರಿಕ ಶಾಂತಿಯನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಇಂದಿನ ಆಧುನಿಕ ವೇಗದ ಮತ್ತು ತಂತ್ರಜ್ಞಾನ ಆಧಾರಿತ ಜೀವನದಲ್ಲಿ ದೈನಂದಿನ ಒತ್ತಡ ನಿರ್ವಹಣೆ ಹಾಗೂ ಸಮಗ್ರ ಆರೋಗ್ಯ ವೃದ್ಧಿಗಾಗಿ ಪ್ರತಿದಿನ ಯೋಗವು ಪರಿಣಾಮಕಾರಿ ಸಾಧನವಾಗಿದೆ ಎಂದು ಅವರು ತಿಳಿಸಿದರು. ನಮ್ಮ ವೈಯಕ್ತಿಕ ಬೆಳವಣಿಗೆ, ಆತ್ಮಶಿಸ್ತು ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ಯೋಗವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳುವAತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಅವರು ಮಾತನಾಡಿ, ಯೋಗದ ಮಹತ್ವವನ್ನು ವಿವರಿಸಿದರು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹ, ಒತ್ತಡ ಸೇರಿದಂತೆ ನಮ್ಮ ಜೀವನಶೈಲಿ ಸಂಬAಧಿತ ಕಾಯಿಲೆಗಳನ್ನು ತಡೆಗಟ್ಟಲು ಯೋಗ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ರಾಜಕುಮಾರ ಬಾಳಿ ಅವರು ಪ್ರತಿದಿನದ ಸಾಮಾನ್ಯ ಯೋಗ ಪ್ರದರ್ಶನ ನಡೆಸಿಕೊಟ್ಟರು. ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ವಿಶ್ರಾಂತಿ ವಿಧಾನಗಳನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಜಿ. ಆರ್. ಅಂಗಡಿ ಅವರು ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ. ವಿ. ಸಾಯಿ ಅಭಿನವ್ ಅವರು ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ವಿ.ವಿ.ಯ ಪ್ರಾಧ್ಯಾಪಕರು, ಭೋದಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.