ಆಳಂದ: ಪಟ್ಟಣದ ತಾಪಂ ಕಚೇರಿ ಮುಂದೆ ಸಿಪಿಐ ಪಕ್ಷದ ಕಾರ್ಯಕರ್ತರು ಬೇಡಿಕೆಗೆ ಒತ್ತಾಯಿಸಿ ಸೋಮವಾರ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಹಿರಿಯ ಮುಖಂಡ ಮೌಲಾ ಮುಲ್ಲಾ ಮಾತನಾಡಿದರು.
ಆಳಂದ: ತಾಲೂಕಿನಾದ್ಯಂತ ತೀವ್ರವಾಗಿರುವ ಕುಡಿಯುವ ನೀರಿನ ಬಿಕ್ಕಟ್ಟು ನಿವಾರಣೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಕಲಬುರಗಿ ಜಿಲ್ಲಾ ಮಂಡಳಿಯ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿ, ತಾಲೂಕ ಪಂಚಾಯಿತಿ ಕಚೇರಿ ಹಾಗೂ ಪುರಸಭೆ ಮುಂದೆ ಸರಣಿಯಾಗಿ ಸೋಮವಾರ ಪ್ರತಿಭಟನೆ ನಡೆಯಿತು.
ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ತಾಲೂಕು ಕಾರ್ಯದರ್ಶಿ ಆಸ್ಪಾಕ್ ಮುಲ್ಲಾ, ಮಹಾದೇವ ಮಂಟಗಿ, ಫಕ್ರೋದ್ದೀನ್ ಗೋಳಾ, ಕಬೀರಾ ಬೇಗಂ ನೇತೃತ್ವದಲ್ಲಿ ನಡೆದ ಪ್ರತಿಭಟನೆ ತಹಸೀಲ್ದಾರ, ಕಚೇರಿ, ಪುರಸಭೆ ಹಾಗೂ ತಾಪಂ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ದಿನಗಟ್ಟಲೇ ಅಲೆದಾಡಬೇಕಾದ ಅನಿವಾರ್ಯತೆ ತಲೆದೋರಿದೆ. ದೊರಕುವ ನೀರು ಸಹ ಗಡಸಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಇದು ಕೇವಲ ಜನರ ಸಮಸ್ಯೆಯಾಗಿ ಉಳಿದಿಲ್ಲ, ದನಕರುಗಳು ಮೇಯಲು ಹೋಗುವ ಸ್ಥಳಗಳಲ್ಲಿ ಅವುಗಳಿಗೂ ಕುಡಿಯಲು ನೀರು ಸಿಗದೇ ಜಾನುವಾರುಗಳೂ ತತ್ತರಿಸುತ್ತಿರುವ ಹೃದಯವಿದ್ರಾವಕ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದರು.
ಈ ಹಿನ್ನೆಲೆಯಲ್ಲಿ ಸಿಪಿಐ ತಕ್ಷಣದ ಪರಿಹಾರ ಕ್ರಮವಾಗಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಅಮರ್ಜಾ ಅಣೆಕಟ್ಟೆಯ ಕಾಲುವೆ, ನಾರಾಯಣಪೂರ ಡ್ಯಾಮಿನಿಂದ ಇಂಡಿ ಬ್ರಾಂಚ್ ಹಾಗೂ ಜೀವರ್ಗಿ ಬ್ರಾಂಚ್ ಕೆನಾಲ್‌ಗಳಿಗೆ ನೀರು ಹರಿಸಬೇಕೆಂದು ಮತ್ತು ಮಹಾರಾಷ್ಟ್ರದ ಉಜ್ಜನಿ ಡ್ಯಾಮಿನಿಂದ ಸೊನ್ನ ಬ್ಯಾರೇಜ್ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಕೆನಾಲ್‌ಗಳಿಗೆ ನೀರು ಹರಿದರೆ ಕೆರೆ ಮತ್ತು ಬೋರ್‌ವೆಲ್‌ಗಳಿಗೂ ಅನುಕೂಲವಾಗಿ ಸ್ವಲ್ಪಮಟ್ಟಿನ ನೀರಿನ ತೊಂದರೆ ನಿವಾರಣೆಯಾಗಲಿದೆ ಎಂದು ಒತ್ತಾಯಿಸಿದರು.
ತಾಲೂಕಿನ ಅಧಿಕಾರಿಗಳು ಎಸಿ ಕಚೇರಿ ಮತ್ತು ಎಸಿ ವಾಹನಗಳಲ್ಲಿ ಕಾಲಹರಣ ಮಾಡುತ್ತ ಕಾಟಾಚಾರದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ನೀರಿನ ಹೆಸರಿನಲ್ಲಿ ಸುಳ್ಳು ಟ್ಯಾಂಕರ್ ಬಿಲ್ ಹಾಗೂ ಸುಳ್ಳು ಖರ್ಚು ಹಾಕಿ ಹಣ ಎತ್ತಿ ಭ್ರಷ್ಟಾಚಾರ ಎಸಗುತ್ತಿರುವ ಅಧಿಕಾರಿಗಳನ್ನು ತಕ್ಷಣ ಅಮಾನತ್ತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ವಜಾ ಮಾಡಬೇಕೆಂದು ಆಗ್ರಹಿಸಿದರು.
ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮ ಹಾಗೂ ಪ್ರತಿ ವಾರ್ಡಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ತಕ್ಷಣ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಬೇಕು, ಜಿಲ್ಲೆಯ ಕೆನಾಲ್‌ಗಳಿಗೆ ಕನಿಷ್ಠ ಒಂದು ಬಾರಿಯಾದರೂ ನೀರು ಹರಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ತಹಸೀಲ್ದಾರರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಿಪಿಐ ಮುಂದಿಟ್ಟಿದೆ. ಬೇಡಿಕೆಗಳು ಈಡೇರದಿದ್ದರೆ ತೀವ್ರ ಹೋರಾಟ ಮುಂದುವರಿಸುವ ಎಚ್ಚರಿಕೆಯೊಂದಿಗೆ ಗಡವು ನೀಡಿದರು.