ಆಳಂದ: ಪಟ್ಟಣದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಅಬ್ದುಲ್ ಖಾದರ ಅವರು ಕಾರ್ಮಿಕರಿಗೆ ಟೋಪಿ ಮತ್ತು ಕರವಸ್ತçಗಳನ್ನು ವಿತರಿಸಿದರು.
ಆಳಂದ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಕಾರ್ಮಿಕರ ಕಲ್ಯಾಣದತ್ತ ಕಾಳಜಿ ತೋರಿದ ಕಾರ್ಯಕ್ರಮ ಗಮನ ಸೆಳೆಯಿತು. ರಾಜ್ಯದ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರ ಬಳಗದ ಅಖಿಲ ಭಾರತ ಕಾಂಗ್ರೆಸ್ ಟ್ರೇಡ್ ಯುನಿಯನ್ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಮಟಕಿ ರಸ್ತೆಯ ಕೊಳಚೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಿಸಿಲಿನಿಂದ ರಕ್ಷಣೆಗಾಗಿ ಟೊಪಿಗಳು ಹಾಗೂ ಕರವಸ್ತ್ರಗಳನ್ನು ವಿತರಿಸಲಾಯಿತು.
ಬೇಸಿಗೆ ತೀವ್ರತೆಯ ನಡುವೆ ದಿನಪೂರ್ತಿ ಹೊರಾಂಗಣದಲ್ಲಿ ದುಡಿಯುವ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಈ ಉಪಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಬಿಸಿಲಿನ ತೀವ್ರತೆಯಿಂದ ಜನರು ಹೊರಬಾರದಂತೆ ಸಲಹೆ ನೀಡಿದರೂ, ಕಾರ್ಮಿಕ ವರ್ಗಕ್ಕೆ ಕೆಲಸಕ್ಕಾಗಿ ಹೊರಬರುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಟೊಪಿ ಮತ್ತು ಕರವಸ್ತ್ರಗಳಂತಹ ಸರಳ ಆದರೆ ಉಪಯುಕ್ತ ವಸ್ತುಗಳ ವಿತರಣೆ ಕಾರ್ಮಿಕರಿಗೆ ಕೆಲಮಟ್ಟಿಗೆ ತಂಪಿನ ನೆರಳಾಗಲಿದೆ. ಕಾರ್ಮಿಕರಿಗೆ ಸಕಾಲಕ್ಕೆ ಸೌಲಭ್ಯ ನೀಡಲು ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅಬ್ದುಲ್ ಖಾದರ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಾಫರ್ ಹಂಗರಗೆ, ಸಾಬೀರ್ ತಾಸೆವಾಲೆ, ಹಮ್ಮಿದ ಶೇಖ, ಆಸೀಫ್ ಅಮ್ಮನೆ, ವಸೀಂ ಖಂಡುವಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಮಿಕರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನೂ ಆಲಿಸಿದರು.
Comments are closed.