Shubhashaya News

ನಿರುದ್ಯೋಗಿ ಪತಿಯಿಂದ ಹೆಚ್ಚಿನ ಜೀವನಾಂಶ ಪಡೆಯುವುದು ಅಸಾಧ್ಯ: ಹೈಕೋರ್ಟ್ ಮಹತ್ವದ ಆದೇಶ

ಪತಿಯು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದು, ಪತ್ನಿಯು ದುಡಿಯುತ್ತಿರುವ ಸಂದರ್ಭದಲ್ಲಿ, ಪತಿಯಿಂದ ಹೆಚ್ಚಿನ ಜೀವನಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿ ಜೀವನಾಂಶ ಹೆಚ್ಚಳ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ಹಾಗೂ ಜೀವನಾಂಶ ಪಾವತಿ ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ ನಡೆಸಿತು.

ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.ಪತಿಗೆ ಸೇರಬೇಕಾದ ಪೂರ್ವಜರ ಆಸ್ತಿ ಇನ್ನೂ ಹಂಚಿಕೆಯಾಗಿಲ್ಲ. ಕೇವಲ ಪೂರ್ವಜರ ಆಸ್ತಿ ಇದೆ ಎಂಬ ಕಾರಣಕ್ಕೆ ಜೀವನಾಂಶದ ಮೊತ್ತವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ತೀರ್ಪಿನ ಪ್ರಮುಖ ಅಂಶಗಳು:
ಸಾಲ ಮಾಡಿ ಜೀವನಾಂಶ ಪಾವತಿ: ಪತಿಯ ಹೆಸರಿನಲ್ಲಿರುವ 1 ಎಕರೆ ಜಮೀನನ್ನು ಈಗಾಗಲೇ ಎರಡು ಬಾರಿ ಅಡಮಾನವಿಟ್ಟು ಸಾಲ ಪಡೆಯಲಾಗಿದೆ. ಆ ಸಾಲದ ಹಣದಿಂದಲೇ ಪತಿ ಜೀವನಾಂಶ ಪಾವತಿಸುತ್ತಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.

ಪ್ರಸ್ತುತ ಸ್ಥಿತಿ: ಪತ್ನಿ ಕೆಲಸ ಮಾಡುತ್ತಿದ್ದು ಸ್ವಾವಲಂಬಿಯಾಗಿದ್ದಾರೆ, ಆದರೆ ಪತಿ ನಿರುದ್ಯೋಗಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿರ್ವಹಣಾ ವೆಚ್ಚವನ್ನು (ಜೀವನಾಂಶ) ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ದಂಪತಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು (ಹೆಚ್ಚಳ ಕೋರಿ ಪತ್ನಿ ಮತ್ತು ರದ್ದು ಕೋರಿ ಪತಿ ಸಲ್ಲಿಸಿದ ಅರ್ಜಿಗಳು) ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

Leave A Reply

Your email address will not be published.