ಸೀತನಿ ಸಂಪ್ರದಾಯದಿಂದ ಕೃಷಿಯ ಮೇಲಿನ ಗೌರವ ಹೆಚ್ಚಲಿ – ಮಕ್ಕಳಲ್ಲಿ ರೈತತ್ವದ ಮೌಲ್ಯ ಬೆಳೆಸುವ ಪ್ರಯತ್ನ:
ಕೆರೆ-ಕಟ್ಟೆ ಅಭಿವೃದ್ಧಿಯೇ ರೈತರ ಬದುಕಿಗೆ ಬೆಳಕು: ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಅಭಿಪ್ರಾಯ
ಆಳಂದ: ಜಿಡಗಾ ರೈತ ಶರಣಪ್ಪ ಸಲಗರ ಹೊಲದಲ್ಲಿ ನಡೆದ ಸೀತನಿ ಕಾರ್ಯಕ್ರಮದಲ್ಲಿ ಜಿಡಗಾ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸತ್ಕಾರ ಸ್ವೀಕರಿಸಿದ ಕ್ಷಣ.
ಆಳಂದ: ಜಿಡಗಾ ಗ್ರಾಮದಲ್ಲಿ ನಡೆದ ಸೀತನಿ ಹಾಗೂ ಪ್ರಸಾದ ಕಾರ್ಯಕ್ರಮದಲ್ಲಿ ಶಿವಯೋಗಿ ಜ್ಞಾನಮಂದಿರದ ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದ ದೃಶ್ಯ.
ಆಳಂದ: ರೈತರ ಬದುಕು ಸಮೃದ್ಧಿಯಾಗಬೇಕಾದರೆ ನೀರಿನ ಸಂಪನ್ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಕೆರೆ-ಕಟ್ಟೆಗಳ ನಿರ್ಮಾಣ, ಪುನಶ್ಚೇತನ ಹಾಗೂ ಅಂತರ್ಜಲ ಹೆಚ್ಚಳ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುವುದು ಅನಿವಾರ್ಯ ಎಂದು ಜಿಡಗಾ, ಮುಗಳಖೋಡ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಜಿಡಗಾ ಗ್ರಾಮದ ರೈತ ಶರಣಬಸಪ್ಪ ಸಂಗಪ್ಪ ಸಲಗರ ಅವರ ತೋಟದಲ್ಲಿ ಜಿಡಗಾ ಶ್ರೀಮಠದ ಶಿವಯೋಗಿ ಜ್ಞಾನಮಂದಿರ ಉಚಿತ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಶಿಷ್ಟ “ಸೀತನಿ” ಹಾಗೂ ಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತನಿಂದ ನಡೆದ ಗುರುಪೂಜೆ ಸತ್ಕಾರ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಮಾತನಾಡಿದ ಶ್ರೀಗಳು, “ಈ ಭಾಗದ ರೈತರು ಮಳೆ ಅವಲಂಬಿತ ಕೃಷಿಯ ಮೇಲೆ ಹೆಚ್ಚು ನಿಂತಿದ್ದಾರೆ. ಮಳೆಯ ಅನಿಶ್ಚಿತತೆ ಕಾರಣದಿಂದ ಕೃಷಿ ಸಂಕಷ್ಟಕ್ಕೆ ಸಿಲುಕುತ್ತಿದೆ. ಹೀಗಾಗಿ ಕೆರೆ-ಕಟ್ಟೆಗಳ ನಿರ್ಮಾಣ ಹಾಗೂ ಹಳೆಯ ಕೆರೆಗಳ ಪುನರುಜ್ಜೀವನಕ್ಕೆ ಸರ್ಕಾರ, ಸಮಾಜ ಮತ್ತು ಮಠಗಳು ಕೈಜೋಡಿಸಬೇಕು. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ ಹಾಗೂ ರೈತರ ಬದುಕು ಹಸನಾಗುತ್ತದೆ” ಎಂದು ಹೇಳಿದರು.
“ಜಿಡಗಾ ಶ್ರೀಮಠದ ಆಶ್ರಯದಲ್ಲಿ ಸರ್ಕಾರದ ಅನುದಾನದಿಂದ ಕೈಗೊಳ್ಳಲಿರುವ ಬೃಹತ್ ಕೆರೆ ಕಾಮಗಾರಿ ಈ ಭಾಗದ ರೈತರಿಗೆ ದೀರ್ಘಕಾಲಿಕ ಲಾಭ ನೀಡಲಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ರೈತರ ಸಂಕಷ್ಟ ನಿವಾರಣೆಗೆ ಶಾಶ್ವತ ಪರಿಹಾರವಾಗಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಪ್ರದಾಯದ ಮಹತ್ವವನ್ನು ವಿವರಿಸಿದ ಅವರು, “ಜೋಳದ ಸಿಹಿತನೆಯನ್ನು ವರ್ಷಕ್ಕೊಮ್ಮೆ ಸವಿಯುವ ‘ಸೀತನಿ’ ಒಂದು ಕೃಷಿ ಸಂಸ್ಕøತಿಯ ಪ್ರತೀಕ. ಈ ಸಂಪ್ರದಾಯವು ರೈತನ ಪರಿಶ್ರಮವನ್ನು ಸ್ಮರಿಸುವುದು ಮಾತ್ರವಲ್ಲ, ಪ್ರಕೃತಿಯೊಂದಿಗೆ ಮಾನವನ ನಂಟನ್ನು ಬಲಪಡಿಸುತ್ತದೆ. ಆಧುನಿಕ ಯುಗದಲ್ಲೂ ಇಂತಹ ಪರಂಪರೆ ಮುಂದುವರಿಯುತ್ತಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆಯ ಸೂಚಕ” ಎಂದರು.
“ಮಕ್ಕಳು ಹೊಲದಲ್ಲಿ ನಡೆಯುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಕೃಷಿಯ ಮಹತ್ವ ತಿಳಿದುಕೊಳ್ಳುತ್ತಾರೆ. ಅನ್ನದಾತನಾದ ರೈತನ ಬಗ್ಗೆ ಗೌರವ ಮೂಡುತ್ತದೆ. ಭವಿಷ್ಯದ ಪೀಳಿಗೆಯಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡುವುದಕ್ಕೂ ಇದು ಸಹಕಾರಿಯಾಗುತ್ತದೆ” ಎಂದು ಹೇಳಿದರು.
“ರೈತ, ಸಮಾಜ ಮತ್ತು ಮಠಗಳ ನಡುವಿನ ಸಂಬಂಧ ಪರಸ್ಪರ ಸಹಕಾರದ ಮೇಲೆ ನಿಂತಿರಬೇಕು. ರೈತರು ಕೇವಲ ಉತ್ಪಾದಕರಲ್ಲ, ಸಮಾಜದ ಆಧಾರಸ್ತಂಭ. ಇಂತಹ ದಾಸೋಹ ಮತ್ತು ಸೀತನಿ ಕಾರ್ಯಕ್ರಮಗಳು ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಶ್ರೀಮಠದ ಭಕ್ತರಾದ ರೈತ ಶರಣಬಸಪ್ಪ ಸಲಗರ ಅವರು ಕೈಗೊಂಡ ಈ ಸೀತನಿ ಹಾಗೂ ದಾಸೋಹ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಗ್ರಾಮೀಣ ಬದುಕಿನ ಸರಳತೆ ಮತ್ತು ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸಿತು. ಈ ಕಾರ್ಯಕ್ರಮವು ರೈತ–ಸಮಾಜ–ಮಠಗಳ ನಡುವೆ ಒಗ್ಗಟ್ಟು ಹಾಗೂ ಸಹಕಾರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಬುದ್ಧ ಆರ್ ಪಾಟೀಲ್, ಲಿಂಗರಾಜ ಪಾಟೀಲ್, ಶಿವಲಿಂಗಯ್ಯ ಮಠಪತಿ (ಉದ್ನೂರು), ಹಣಮಂತರಾಯ್ (ಉದ್ನೂರು), ಬಸವರಾಜ್ (ಉದ್ನೂರು), ಶರಣಬಸಪ್ಪ ಯಾದವಾಡ, ಹಿರಿಯ ದೇವರಾಯ ಜವಳಿ, ವಿಶ್ವನಾಥ್ ಪಾಟೀಲ್, ಸಿದ್ಧರಾಮ ಯಾದವಾಡ, ಕಾಶಿನಾಥ್ ಪಾಟೀಲ್, ರೇವಣಸಿದ್ಧ ಯಾದವಾಡ, ಜಮಗಾ (ಜೆ) ಗ್ರಾಮದ ಗುಂಡೇರಾಯ್ ಪಾಟೀಲ್, ಯೋಗೇಶ್ ಸಕ್ಕರ್ಗಿ, ಕಲ್ಲಪ್ಪ ಗುತ್ತೇದಾರ್, ರಮೇಶ್ ಪಾಟೀಲ್ ಸೇರಿದಂತೆ ಅನೇಕ ರೈತರು, ಸ್ಥಳೀಯ ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸೀತನಿ ಸವಿದು ಪ್ರಸಾದ ಸ್ವೀಕರಿಸಿದರು. ಯಲ್ಲಾಲಿಂಗ ಸಲಗರ ಸ್ವಾಗತಿಸಿ ವಂದಿಸಿದರು.
Comments are closed.