Shubhashaya News

ಎಐ ಯುಗದಲ್ಲಿ ಸಂಶೋಧನಾ ನೈತಿಕತೆ: ಟೂಲ್ ಬಳಕೆಗೆ ಕಡಿವಾಣ, ಗುಣಮಟ್ಟದ ಕೃತಿಗೆ ಸಿಯುಕೆ ಹೊಸ ದಿಕ್ಕು

ಕೃತಿಚೌರ್ಯ, ನೈತಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನಕ್ಕೆ ಒತ್ತು – ಸಂಶೋಧನಾ ಲೋಕಕ್ಕೆ ಸಿಯುಕೆ ಮಾರ್ಗದರ್ಶಕ ಮಾದರಿ

ಆಳಂದ: ಕಡಗಂಚಿ ಬಳಿಯ ರಾಜ್ಯದ ಏಕೈಕ ಕೇಂದ್ರೀಯ ವಿವಿ ನೋಟ್.

ಆಳಂದ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಟೂಲ್‍ಗಳ ವೇಗದ ವಿಸ್ತಾರವು ಸಂಶೋಧನಾ ಕ್ಷೇತ್ರದಲ್ಲೂ ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ಎಐ ಟೂಲ್‍ಗಳ ಮೂಲಕ ಸಂಶೋಧನಾ ಪ್ರಬಂಧ ಹಾಗೂ ಕೃತಿಗಳನ್ನು ಸಿದ್ಧಪಡಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಸಂಶೋಧನೆಯ ಮೂಲ ಉದ್ದೇಶವಾದ ಆಳ ಅಧ್ಯಯನ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಸತ್ಯಶೋಧನೆಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಸಂಶೋಧನಾ ನೈತಿಕತೆ ಮತ್ತು ಗುಣಮಟ್ಟ ಕಾಪಾಡುವ ಉದ್ದೇಶದಿಂದ ಅತ್ಯಾಧುನಿಕ ಪತ್ತೆಹಚ್ಚುವ ಸಾಫ್ಟ್‍ವೇರ್ ಅಳವಡಿಸಿಕೊಂಡು ಎಐ ಆಧಾರಿತ ಕೃತಿಶೌರ್ಯಕ್ಕೆ ಕಡಿವಾಣ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಶೋಧನೆಯು ಕೇವಲ ಪದಗಳ ಸಂಗ್ರಹವಾಗದೆ, ಸಮಾಜಕ್ಕೆ ಹೊಸ ತಿಳುವಳಿಕೆ, ವೈಜ್ಞಾನಿಕ ಪ್ರಗತಿ ಮತ್ತು ಸಾಮಾಜಿಕ ಪರಿವರ್ತನೆಗೆ ದಾರಿ ತೋರಬೇಕು ಎಂಬ ಧ್ಯೇಯವನ್ನು ಸಿಯುಕೆ ಮುಂದಿಟ್ಟಿದೆ. ಈ ಹಿನ್ನೆಲೆ, ಎಐ ಟೂಲ್ ಬಳಸಿ ತ್ವರಿತವಾಗಿ ಸಿದ್ಧಗೊಳಿಸುವ ಕೃತಿಗಳ ಬದಲು, ಸಂಶೋಧಕರು ಸ್ವಂತ ಅಧ್ಯಯನ, ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ನೈತಿಕತೆಯೊಂದಿಗೆ ರೂಪಿಸುವ ಸಂಶೋಧನೆಗೆ ಒತ್ತು ನೀಡಬೇಕೆಂಬ ಸಂದೇಶವನ್ನು ವಿಶ್ವವಿದ್ಯಾಲಯ ಬಲವಾಗಿ ಸಾರಿದೆ.
ಯುಜಿಸಿ ಮಾರ್ಗಸೂಚಿಗಳ ಅನ್ವಯ, ಸಂಶೋಧನಾ ಹಾಗೂ ಪ್ರಕಟಣಾ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಈ ಮಾನದಂಡಗಳ ಜಾರಿಗಾಗಿ ಸಿಯುಕೆ ವಿವಿಧ ತಾಂತ್ರಿಕ ಸಾಧನಗಳು ಮತ್ತು ಪತ್ತೆ ಸಾಫ್ಟ್‍ವೇರ್‍ಗಳನ್ನು ಅಳವಡಿಸಿಕೊಂಡಿದ್ದು, ಸಂಶೋಧನಾ ಪ್ರಬಂಧಗಳಲ್ಲಿ ನಕಲು, ಎಐ ಆಧಾರಿತ ಬರವಣಿಗೆ ಮತ್ತು ಅಸಲಿ ತತ್ವದ ಕೊರತೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.
ಈ ಕುರಿತಾಗಿ ಮಾತನಾಡಿದ ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು,
“ಸಂಶೋಧನಾ ವಿದ್ವಾಂಸರು ಹೊಸ ಮತ್ತು ಮುಂಬರುವ ತಂತ್ರಜ್ಞಾನವನ್ನು ಕಲಿಯಬೇಕು. ಆದರೆ ಅದನ್ನು ಶಾರ್ಟ್‍ಕಟ್‍ಗಾಗಿ ಬಳಸದೇ, ತಮ್ಮ ಸಂಶೋಧನಾ ಕೌಶಲ್ಯವನ್ನು ಉನ್ನತೀಕರಿಸಲು ಉಪಯೋಗಿಸಬೇಕು. ನೈತಿಕತೆ ಇಲ್ಲದ ಸಂಶೋಧನೆ ಸಮಾಜಕ್ಕೆ ಹಾನಿಕರ. ಆದ್ದರಿಂದ ಗುಣಮಟ್ಟ, ನೈತಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವೇ ನಮ್ಮ ಪ್ರಧಾನ ಆದ್ಯತೆ” ಎಂದು ಸ್ಪಷ್ಟಪಡಿಸಿದರು.
ಸಂಶೋಧನೆ ಮತ್ತು ಪ್ರಕಟಣದಲ್ಲಿ ನೈತಿಕತೆ ಕುರಿತಂತೆ ಸಿಯುಕೆ ಕೇಂದ್ರ ಗ್ರಂಥಾಲಯದ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಾಗಾರದಲ್ಲಿ, ಸಂಶೋಧನೆಯ ಆಳ, ಅಗಲ ಮತ್ತು ಸಾಮಾಜಿಕ ಉಪಯುಕ್ತತೆ ಕುರಿತು ವಿಶದ ಚರ್ಚೆ ನಡೆಯಿತು. ಗ್ರಾಮೀಣ ಅಭಿವೃದ್ಧಿ, ಕೃಷಿ ವಲಯದ ಉನ್ನತಿ, ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳತ್ತ ಕೇಂದ್ರೀಕೃತ ಸಂಶೋಧನೆಗಳು ಸಮಾಜದಲ್ಲಿ ನೈಜ ಬದಲಾವಣೆ ತರಬಲ್ಲವು ಎಂಬುದನ್ನು ತಜ್ಞರು ಒತ್ತಿ ಹೇಳಿದರು.
ಸಿಯುಕೆಯ ಶಿಕ್ಷಣ ನಿಕಾಯದ ಡೀನ್ ಪೆÇ್ರ. ಜಿ. ಆರ್. ಅಂಗಡಿ ಅವರು,
“ಯುಜಿಸಿ ರೂಪಿಸಿದ ಸಂಶೋಧನಾ ಪಠ್ಯಕ್ರಮವು ಆರಂಭಿಕ ಸಂಶೋಧಕರಿಗೆ ಅತ್ಯಂತ ಸಹಾಯಕವಾಗಿದೆ. ಇದು ವಿದ್ಯಾರ್ಥಿಗಳನ್ನು ಕ್ರಮಬದ್ಧವಾಗಿ ಚಿಂತಿಸಲು, ಯೋಜನೆ ರೂಪಿಸಲು ಮತ್ತು ವೈಜ್ಞಾನಿಕವಾಗಿ ಸಂಶೋಧನೆ ನಡೆಸಲು ಸಮರ್ಥವಾಗಿ ಬೆಳೆಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು,
“ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಪ್ರಕಟಿತ ಕೃತಿ ಜಗತ್ತಿನ ಮಟ್ಟದಲ್ಲಿ ಸ್ವೀಕಾರಾರ್ಹವಾಗಬೇಕು, ಪ್ರಭಾವ ಬೀರುವಂತಿರಬೇಕು. ಇದರಿಂದ ವಿಶ್ವವಿದ್ಯಾಲಯಕ್ಕೆ ಹೆಸರು ಮತ್ತು ಖ್ಯಾತಿ ದೊರೆಯುತ್ತದೆ” ಎಂದು ಹೇಳಿದರು.
ಕೇಂದ್ರ ಗ್ರಂಥಪಾಲಕ ಹಾಗೂ ಕೋರ್ಸ್ ಸಂಯೋಜಕ ಡಾ. ಪಿ. ಎಸ್. ಕಟ್ಟಿಮನಿ ಅವರು,
“ಸೈದ್ಧಾಂತಿಕ ಉಪನ್ಯಾಸಗಳ ಜೊತೆಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಸಂಶೋಧನಾ ತರಬೇತಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ನೈಜ ಸಂಶೋಧನಾ ಅನುಭವ ದೊರೆಯುತ್ತದೆ” ಎಂದು ವಿವರಿಸಿದರು.
ಒಟ್ಟಾರೆ, ಎಐ ಯುಗದಲ್ಲಿ ಸಂಶೋಧನೆ ವೇಗ ಪಡೆಯುತ್ತಿದ್ದರೂ, ಅದರೊಂದಿಗೆ ನೈತಿಕತೆ, ಪ್ರಾಮಾಣಿಕತೆ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಕಾಪಾಡುವುದು ಅತ್ಯಗತ್ಯವಾಗಿದೆ. ಈ ದಿಕ್ಕಿನಲ್ಲಿ ಸಿಯುಕೆಯ ಕ್ರಮಗಳು ರಾಷ್ಟ್ರಮಟ್ಟದಲ್ಲಿ ಮಾದರಿಯಾಗುವಂತಿದ್ದು, ಭವಿಷ್ಯದ ಸಂಶೋಧನಾ ಸಂಸ್ಕøತಿಗೆ ಹೊಸ ದಿಕ್ಕು ನೀಡಲಿವೆ.

Comments are closed.

Don`t copy text!