ಸತತ ಮಳೆಯಿಂದ ಹಾನಿ ಪರಿಹಾರಕ್ಕೆ ಮಾಜಿ ಶಾಸಕ ಗುತ್ತೇದಾರ ಆಗ್ರಹ
ಏಕರೆಗೆ 25 ಸಾವಿರ ನೀಡಲು ಆಗ್ರಹ
ಆಳಂದ ತಾಲೂಕಿನಲ್ಲಿ ಸತತವಾಗಿ 15 ದಿನಗಳಿಂದ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ, ಆಸ್ತಿ ಪಾಸ್ತಿ ಹಾನಿಯಾಗಿರುವುದುರಿಂದ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಈಗ ಕಂಗಲಾಗಿದ್ದಾರೆ. ಆಳಂದ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿದಿರುವುದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ ಹಾನಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಲು ಆಗ್ರಹಿಸಿದ್ದಾರೆ.
ಮಳೆ ವ್ಯಾಪಕವಾಗಿ ಬಿದ್ದಿರುವುದರಿಂದ ತಾಲೂಕಿನ ನಾಗರಿಕರಿಗೆ ಅಪಾರ ಪ್ರಮಾಣದ ಹಾನಿಯ ಭೀತಿ ಎದುರಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು, ಉದ್ದು, ತೊಗರಿ ಬೆಳೆದಿದ್ದಾರೆ ಈಗ ಮಳೆಯಿಂದ ಹೆಸರು, ಉದ್ದು, ಸೋಯಾಬಿನ್ ಬೆಳೆಗಳು ಹಾಳಾಗಿವೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ತಿಳಿಸಿದ್ದಾರೆ.
ಪ್ರಮುಖ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ರೈತರ ನೆರವಿಗೆ ಧಾವಿಸಬೇಕು ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ, ಲೋಕೋಪಯೋಗಿ, ಸಣ್ಣ ನೀರಾವರಿ, ಇಂಧನ ಇಲಾಖೆ ಅಧಿಕಾರಿಗಳು ಮಳೆಯಿಂದ ಹಾನಿಗೀಡಾದ ರಸ್ತೆ, ಶಾಲಾ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಇತರೆ ಕಟ್ಟಡಗಳ ದುರಸ್ತಿ ಮತ್ತು ಪುನರ ದುರಸ್ತಿ ಕಾರ್ಯದಲ್ಲಿ ತೊಡಗಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಗ್ರಾಮ ಪಂಚಾಯತಗಳಲ್ಲಿ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮೀಣ ಭಾಗದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ವಿಶೇಷವಾಗಿ ಜುಲೈ 15 ರಿಂದ ಆಗಸ್ಟ್ 20ರ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ತೊಂದರೆ ಉಂಟಾಗಿದೆ. ಹಾಲು ಉತ್ಪಾದನೆ ಹಾಗೂ ದಿನಗೂಲಿ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಿದ್ದು, ರೈತರ ಬದುಕು ಸಂಕಷ್ಟಕ್ಕೆ ತುತ್ತಾಗಿದೆ. ಬೆಳೆಹಾನಿಯ ಸಮಗ್ರ ಸರ್ವೇ ನಡೆಸಿ ಪ್ರತಿ ಏಕರೆಗೆ 25 ಸಾವಿರ ರೂಪಾಯಿ ಪರಿಹಾರ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಬೆಳೆ ವಿಮೆ ಕೈಗೊಂಡ ರೈತರು ಬೆಳೆ ಹಾಳಾದ ಕುರಿತು ಕಂಪನಿಯ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಭೇಟಿಯಾಗಿ ಸಮಸ್ಯೆ ತೋಡಿಕೊಂಡರೆ ಬೆಳೆ ಹಾಳಾದವರು ಅರ್ಜಿ ಕೊಡಿ ಎನ್ನುತ್ತಿದ್ದಾರೆ. ಎಲ್ಲಾ ರೈತರಿಗೆ ತಮ್ಮ ಕೆಲಸ ಬಿಟ್ಟು ಅರ್ಜಿ ಕೊಡಲು ಕಚೇರಿಗಳಿಗೆ ಅಲೆದಾಟ ಮಾಡಿಸುವುದು ಸರಿಯಲ್ಲ. ಪ್ರತಿ ಗ್ರಾ.ಪಂ. ಮಟ್ಟದಲ್ಲಿ ವಿಮಾ ಕಂಪನಿಯ ಸಿಬ್ಬಂದಿಗಳಿಂದ ಬೆಳೆ ಹಾನಿಯ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿಯಾಗಿ ಅಧಿಕಾರಿಗಳು ತಕ್ಷಣ ಸರ್ವೇ ಮಾಡಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಘೋಷಿಸಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.
Comments are closed.