ಧಾರಾಕಾರ ಮಳೆಯಿಂದ ಆಳಂದ ತಾಲೂಕು ಸಂಕಷ್ಟದಲ್ಲಿ
ಅಮರ್ಜಾ ಅಣೆಕಟ್ಟೆ sಸೇರಿ 37 ಕೆರೆಗಳು ತುಂಬಿ ಹರಿದು ಆತಂಕ, ರೈತರ ಬೆಳೆ ಜಲಾವೃತ – ಜನಜೀವನ ಅಸ್ತವ್ಯಸ್ತ
ಆಳಂದ: ಪಟ್ಟಣದ ಸಣ್ಣ ನೀರಾವರಿ ಇಲಾಖೆ ಕೆರೆ ತುಂಬಿ ವೆಷ್ಟ್‍ವೇರ್‍ನಿಂದ ರಬಸದಿಂದ ನೀರು ಹೊರಬರುತ್ತಿದ್ದು, ಕೆಳಭಾಗದ ಹಳ್ಳದ ನೀರಿನಿಂದ ಹೆದ್ದಾರಿಯ ಧಬದಬಿ ಬಳಿ ಸಂಚಾರಕ್ಕೆ ಅಡ್ಡಿಯಾಗಿದೆ.
ಆಳಂದ: ಅಮರ್ಜಾ ಅಣೆಕಟ್ಟೆ ಭರ್ತಿಯಿಂದಾಗಿ ಗೇಟ್ ಮೂಲಕ ನೀರು ಹೊರಬಿಡಲಾಗುತ್ತಿದೆ.
ಆಳಂದ: ಅಣೆಕಟ್ಟೆ ಒಳಹರಿವು ಕುರಿತು ಮಧ್ಯಮ ನೀರಾವರಿ ಇಲಾಖೆ ಎಇಇ ರಾಜಕುಮಾರ ಜಲ್ದೆ, ಎಇ ಮಲ್ಲಿಕಾರ್ಜುನ ಪರಿಶೀಲಿಸಿದರು.
ಆಳಂದ: ಧಾರಾಕಾರ ಮಳೆಯಿಂದಾಗಿ ಬೆಳೆದು ನಿಂತ ಬೆಳೆ ಜಲಾವೃತ್ತಗೊಂಡು ಹಾನಿಯಾಗಿದೆ.
ಆಳಂದ: ವಾರದಿಂದ ಆಳಂದ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಭಾಗಗಳಲ್ಲಿ ನಿರಂತರ ಜಿಟಿಜಿಟಿ ತುಂತುರು ಮಳೆಯೊಂದಿಗೆ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದೆ. ಇದರ ಪರಿಣಾಮವಾಗಿ ಅಮರ್ಜಾ ಅಣೆಕಟ್ಟೆ ಸೇರಿದಂತೆ ತಾಲೂಕಿನ 37 ಕೆರೆಗಳು ಭರ್ತಿಯಾಗಿ ಹರಿಯಲು ಆರಂಭಿಸಿದರೆ, ಮತ್ತೊಂದೆಡೆ ರೈತರ ಕೈಗೆ ಬಂದ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾದವು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ಅಲ್ಲಲ್ಲಿ ಮನೆಗಳು ಕುಸಿದು, ವ್ಯಾಪಾರ ವಹಿವಾಟು ಕುಂಠಿತಗೊಂಡಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಕೆರೆ ತುಂಬಿ ಹರಿಯುತ್ತಿದ್ದು ಆತಂಕ ಹೆಚ್ಚಿಸಿದ ಸ್ಥಿತಿ:
ಸಾಲೇಗಾಒವ್ ಮತ್ತು ಆಳಂದ ಕೆರೆಗಳು ವೇಸ್ಟ್‍ವೇರ್‍ನಿಂದ ನೀರು ಹರಿಯಲಾರಂಭಿಸಿದ್ದು, ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ನಿಂತು ಬೆಳೆ ಹಾನಿಯ ಆತಂಕ ಹೆಚ್ಚಿದೆ. 18 ಕಾಲುವೆ ಕೆರೆಗಳು ಹಾಗೂ 17 ಜಿನುಗು ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಹಳ್ಳ-ಹರಿವುಗಳೆಲ್ಲಾ ಪ್ರಚಂಡವಾಗಿ ಹರಿಯುತ್ತಿವೆ. ತೋಟಗಾರಿಕೆ ಇಲಾಖೆ ಪ್ರಕಾರ ಇನ್ನೂ ತೋಟಗಾರಿಕಾ ಬೆಳೆಗಳು ಹಾನಿಯಾಗದಿದ್ದರೂ, ಮಳೆಯ ಅಬ್ಬರ ಮುಂದುವರಿದರೆ ಅವುಗಳಿಗೂ ತೀವ್ರ ಹಾನಿ ಸಂಭವಿಸಲಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ರೈತರ ಗೋಳು – “ಕೈಗೆ ಬಂದ ಬೆಳೆ ಹಾಳಾಗುತ್ತಿದೆ”
ತೊಗರಿ, ಉದ್ದು, ಹೆಸರು ಸೇರಿದಂತೆ ಬಹುತೇಕ ಬೆಳೆಗೆ ನೀರು ನುಗ್ಗಿದ್ದು, ರೈತರು ಬೆಳೆ ಕೊಳೆತುಹೋಗುವ ಭಯದಲ್ಲಿ ಇದ್ದಾರೆ. “ಮಳೆ ನಿಂತ ನಂತರವೇ ನಿಜವಾದ ಹಾನಿಯ ಅಂದಾಜು ಸಾಧ್ಯ, ಆದರೆ ಈಗಲೇ ಹೆಚ್ಚಿನ ಹಾನಿ ಖಚಿತ” ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಕುಸಿತ – ಜನರಲ್ಲಿ ಆತಂಕ
ಯಳಸಂಗಿ, ಸರಸಂಬಾ, ವೈಜಾಪೂರ, ಜವಳಿ, ಲಿಂಗದಳ್ಳಿ ಹಾಗೂ ಸಾವಳೇಶ್ವರ ಸೇರಿ ಹಲವು ಗ್ರಾಮಗಳಲ್ಲಿ ಹಳೆಯ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಕೆಲವು ಗ್ರಾಮಗಳಲ್ಲಿ ನೀರು ಮನೆಗಳಿಗೆ ನುಗ್ಗಿದ್ದು ಜನರು ಜೀವನ ಅಸ್ತವ್ಯವಸ್ಥವಾಗಿದೆ. “ಮನೆಯ ಗೋಡೆ ಕುಸಿದು ಒಳಗಿನ ಸಾಮಾನು ನಾಶವಾಯಿತು, ಈಗ ಎಲ್ಲಿ ವಾಸಿಸಬೇಕು ಎಂಬ ಆತಂಕದಲ್ಲಿ ಇದ್ದೇವೆ” ಎಂದು ಅಲಿನ ನಿವಾಸಿಗಳು ಕಣ್ಣೀರು ಸುರಿಸಿದ್ದಾರೆ.
ರಸ್ತೆ ಸಂಚಾರ ಮತ್ತು ವ್ಯಾಪಾರಕ್ಕೆ ಪೇಟ್ಟು:
ಗ್ರಾಮಾಂತರ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಪಟ್ಟಣದಲ್ಲಿ ವ್ಯಾಪಾರ ಕುಂಠಿತಗೊಂಡಿದ್ದು, ವ್ಯಾಪಾರಿಗಳು ನಷ್ಟ ಎದುರಿಸುತ್ತಿದ್ದಾರೆ. “ಗ್ರಾಹಕರೇ ಇಲ್ಲ, ಅಂಗಡಿಗಳು ಖಾಲಿಯಾಗಿವೆ” ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮರ್ಜಾ ಅಣೆಕಟ್ಟೆಯ ಸಾಮಥ್ರ್ಯ 1.555 ಟಿಎಂಸಿ ಇದ್ದು, ಈಗಾಗಲೇ 1.450 ಟಿಎಂಸಿ ತುಂಬಿರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ಗೇಟ್‍ಗಳನ್ನು ಎತ್ತಿ ನೀರು ಬಿಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಸಾಧ್ಯತೆ ಇದ್ದು ನದಿ ದಡದಲಿನ ಜನ ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ಮನವಿಮಾಡಿದ್ದಾರೆ.
ಅಣೆಕಟ್ಟೆಯ ಒಳಭಾಗದಲ್ಲಿ ನೀರು ಉಕ್ಕಿ ಆಳಂದ ಪಂಪ್‍ಹೌಸ್‍ಗೆ ನುಗ್ಗಿದ್ದರಿಂದ ಪೈಪ್‍ಲೈನ್ ಸೋರಿಕೆಯಾದರೂ ತುರ್ತು ಕ್ರಮ ಕೈಗೊಂಡು ಮರುಜೋಡಣೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಹೇಳಿಕೊಂಡಿದ್ದಾರೆ.
ಮಕ್ಕಳ ಶಿಕ್ಷಣಕ್ಕೂ ತೊಡಕು:
ಗ್ರಾಮಾಂತರ ರಸ್ತೆಗಳು ಕೆಸರುಮಯವಾಗಿದ್ದು, ನೀರು ನಿಂತಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಹೆದರಿದ್ದಾರೆ. ಕೆಲವು ಗ್ರಾಮಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ.
ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ
“ಮಳೆಯಿಂದ ಉಂಟಾದ ಸಂಕಷ್ಟ ನಿವಾರಣೆಗೆ ಆಡಳಿತ ಸ್ಪಂದಿಸಬೇಕು. ರಸ್ತೆ ದುರಸ್ತಿ, ಚರಂಡಿ ಸ್ವಚ್ಛತೆ, ಕೆರೆ ನಿರ್ವಹಣೆ ತಕ್ಷಣ ಕೈಗೊಳ್ಳಬೇಕಿದೆ” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಮಳೆಯ ಸವಿನೆನಪು ನೀಡಿದ ನೀರಿನ ತುಂಬು, ಜನಜೀವನಕ್ಕೆ ದುಃಖದ ಬಿರುಗಾಳಿ ತರಿಸಿದೆ. ರೈತರಿಗೆ ಬೆಳೆ ಹಾನಿ, ವ್ಯಾಪಾರ ಕುಸಿತ, ಮನೆ ಕುಸಿತ, ಸಂಚಾರ ತೊಂದರೆ – ಎಲ್ಲವೂ ಒಂದೇ ವೇಳೆ ಎದುರಾಗಿದ್ದು, ತಕ್ಷಣದ ಪರಿಹಾರ ಕ್ರಮ ಅಗತ್ಯವಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.
Comments are closed.