Shubhashaya News

ರುದ್ರವಾಡಿ: ಬಸವೇಶ್ವರ ಪ್ರತಿಮೆ ಯಥಾಸ್ಥಿತಿ ಕಾಪಾಡಲು ಆಗ್ರಹ

ರುದ್ರವಾಡಿ ಗ್ರಾಮದಲ್ಲಿ ತೆರವುಗೊಳಿಸಿದ ಸ್ಥಳದಲ್ಲೇ ಪುನ: ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪಿಸಿ ವಿವಾದ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ ಹೀರಾ ಆಳಂದ ತಹಸೀಲದಾರರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ದಿ. 11ನೇ ಆಗಷ್ಟ್ 2025ರಂದು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ ಕೆಲವು ಮತೀಯ ಶಕ್ತಿಗಳು ಗ್ರಾಮದಲ್ಲಿ ಸೌಹಾರ್ದ ವಾತಾವರಣ ಕೆಡಿಸಲು ಈ ಜಾಗಕ್ಕೆ ತಕರಾರು ತೆಗೆದು ಇದು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ ಜಾಗವೆಂದು ಆಕ್ಷೇಪಣೆ ಸಲ್ಲಿಸಿ ಪ್ರತಿಮೆಯನ್ನು ತೆಗೆಯಲು ಅರ್ಜಿ ಸಲ್ಲಿಸಿರುತ್ತಾರೆ. ಸದರಿ ವಿಷಯದ ಕುರಿತು ತಹಸೀಲದಾರರು ಗ್ರಾಮಕ್ಕೆ ಆಗಮಿಸಿ ಎಲ್ಲ ಸಮುದಾಯದವರ ಜೊತೆ ಮಾತುಕತೆ ನಡೆಸಿ ಸದರಿ ಜಾಗವನ್ನು ತಹಸೀಲ ಕಚೇರಿಯಿಂದ ಸರ್ವೇ ಮಾಡಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿ ಹೋಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ದಿ. 14ನೇ ಆಗಷ್ಟ್ 2025ರ ಗುರುವಾರದಂದು ತಾಲೂಕು ಸರ್ವೇಯರ್ ಅಕ್ಷಯ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್ ಅವರು ಬೆಳಿಗ್ಗೆ 11 ಗಂಟೆಗೆ ಬಂದು ಎಲ್ಲ ಸಮುದಾಯದ ಮುಖಂಡರೊಂದಿಗೆ ಶಾಲೆಯ ಕೋಣೆಯಲ್ಲಿ ಕುಳಿತು ಚರ್ಚಿಸಿದಾಗ ತಾಲೂಕು ಸರ್ವೇಯರ್ ಅವರು ಸರ್ವೇ ಜಾಗದಲ್ಲಿ ಕಟ್ಟಡ ಇರುವುದರಿಂದ ಸಾಕಳಿ( ಚೈನ್) ಮುಖಾಂತರ ಸರ್ವೇ ಬರುವುದಿಲ್ಲ ಎಂದು, ಇನ್ನೊಂದು ವಿಧಾನ ಇರುತ್ತದೆ ಎಂದಾಗ ಮಶೀನ್ ಮುಖಾಂತರ ಸರ್ವೇ ಮಾಡಲು ಬರುತ್ತದೆ ಎಂದು ಹೇಳಿ ಅದಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೇಳಿದಾಗ ಅದಕ್ಕೆ ಎಲ್ಲ ಸಮುದಾಯದವರು ಅವರ ಮಾತಿಗೆ ಒಪ್ಪಿಗೆ ಸೂಚಿಸಿರುತ್ತಾರೆ. ನಂತರ ಅದೇ ದಿನ ಸಾಯಂಕಾಲ 5 ಗಂಟೆಗೆ ತಹಸೀಲದಾರ ಮತ್ತು ಸರ್ಕಲ್ ಇನ್ಸ್‍ಪೆಕ್ಟರ್ ಅವರು ಯಾರಿಗೂ ತಿಳಿಸದೇ ಏಕಾಏಕಿ ಗ್ರಾಮಕ್ಕೆ ಬಂದು ಪ್ರತಿಮೆಯನ್ನು ತೆರವುಗೊಳಿಸಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇಟ್ಟಿರುತ್ತಾರೆ ಇದು ತಹಸೀಲದಾರರು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಅವರು ಎಲ್ಲ ಸಮುದಾಯದ ಜನರಿಗೆ ಮಾಡಿದ ದ್ರೋಹವಾಗಿರುತ್ತದೆ ಎಂದು ದೂರಿದ್ದಾರೆ.
ಸದರಿ ಜಾಗದ ಸರ್ವೇ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಯಥಾಸ್ಥಿತಿ ಕಾಪಾಡುವಂತೆ ತಹಸೀಲದಾರರಿಗೆ ಆಗ್ರಹಿಸಿದ್ದಾರೆ.

 

Comments are closed.

Don`t copy text!