Shubhashaya News

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಯುವಕರ ಜಿಂಗ್ ಜಾಂಗ್

ಪಾಲಕರಿಗೆ ತಲೆನೋವಾಗಿ ಪರಿಣಮಿಸಿದ ಜೂಜಾಟ

ಎಂ.ಡಿ ಮಶಾಖ
ಚಿತ್ತಾಪುರ: ಐಪಿಎಲ್ ಕ್ರಿಕೆಟ್ ದಿನದಿಂದ ದಿನ ರಂಗೇರುತ್ತಿರುವುದರ ಮಧ್ಯೆ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದೆ. ಆಟದ ಹೆಸರಲ್ಲಿ ಜೂಜಾಟದ ಗೀಳಿಗೆ ಒಳಗಾದ ಹಲವು ಯುವಕರು, ಪಾಲಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಹಿಂದೇ ಗುಪ್ತವಾಗಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆ ಸದ್ಯ ಅಂತರ್ಜಾಲದ ಮುಖಪುಟ ಆವರಿಸಿದೆ. ಈ ಮೂಲಕ ಜೂಜಾಟವೂ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ. ಕೆಲ ಕ್ರಿಕೆಟ್ ಅಭಿಮಾನಿಗಳು, ಪಂದ್ಯ ವಿಕ್ಷಿಸಿ ಸಂಭ್ರಮಿಸಿದರೆ ಇನ್ನೂ ಕೆಲವರು ಬೆಟ್ಟಿಂಗ್ ದಂಧೆಗೆ ಮಾರುಹೋಗಿದ್ದಾರೆ. ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆಯವರಿಗೆ ಹೈಟೆಕ್ ವ್ಯವಹಾರದ ಆಳ ಅಗಲ ತಿಳಿಯದಾಗಿದೆ.
ಮಟ್ಕಾ, ಇಸ್ಪೀಟ್ ಜೂಜಾಟಗಳಲ್ಲಿ ವಯಸ್ಕರು ಹೆಚ್ಚಾಗಿ ಕಂಡು ಬರುತ್ತಾರೆ. ಆದರೆ ಈ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಾಲೇಜು ವಿದ್ಯಾರ್ಥಿಗಳು ಸೇರಿ ಬಹುತೇಕ ಯುವ ಸಮುದಾಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿದೆ.
ಆನ್‍ಲೈನ್‍ನಲ್ಲಿ ವ್ಯವಹಾರ ಇರುವುದರಿಂದ ಯಾವ ಪಂದ್ಯ? ಎಷ್ಟು ಗಂಟೆಗೆ ಆರಂಭ? ಎದುರಾಳಿ ಪಂದ್ಯದಲ್ಲಿ ಯಾರು ಉತ್ತಮ ಆಟಗಾರರು? ಅವರ ಪ್ರದರ್ಶನ ಹೇಗೆ? ಯಾವ ಟೀಂ ಟಾಸ್ ಗೆಲ್ಲುತ್ತದೆ? ಯಾವ ಬೌಲರ್ ಎಷ್ಟು ವಿಕೆಟ್ ಪಡೆಯುತ್ತಾನೆ? ಯಾವಾ ಬ್ಯಾಟ್ಸ್‍ಮ್ಯಾನ್ ಎಷ್ಟು ರನ್ ಹೋಡೆಯುತ್ತಾನೆ? ಎಷ್ಟು ಓವರ್‍ಗಳಲ್ಲಿ ಪಂದ್ಯ ಮುಗಿಯಲಿದೆ? 10 ಓವರ್‍ಗಳಲ್ಲಿ ಬ್ಯಾಟಿಂಗ್ ಟೀಂ ಎಷ್ಟು ರನ್ ಗಳಿಸುತ್ತದೆ? 20 ಓವರ್‍ನಲ್ಲಿ ಎಷ್ಟು ರನ್ ಹೊಡೆಯುತ್ತದೆ? ಯಾವುದು ಫೇವ್‍ರೇಟ್ ಟೀಂ? ಯಾವುದು ಅನ್ ಪೇವ್‍ರೀಟ್ ಟೀಂ ಎಂದು ತರಾವರಿ ಪ್ರಶ್ನೆ ಹಾಕಿ ಬೆಟ್ಟಿಂಗ್‍ಗೆ ಹಣ ಹೂಡುವ ಖಯಾಲಿ ದಟ್ಟವಾಗಿ ಗೋಚರಿಸಿದೆ.
ಬೆಟ್ಟಿಂಗ್‍ನಲ್ಲಿ ಹೂಡಿಕೆ ಮಾಡಿದ ಹಣವನ್ನು ಆನ್‍ಲೈನ್‍ನಲ್ಲಿಯೇ ಬುಕ್ಕಿಗಳಿಗೆ ಅಥವಾ ಬೆಟ್ಟಿಂಗ್ ಆಡಿಸಿದವರ ಖಾತೆಗೆ ಹಣ ರವಾನೆಯಾಗುತ್ತಿದೆ. ಪಂದ್ಯ ಆರಂಭವಾದ ವೇಳೆ ಕಣದಲ್ಲಿರುವ ಎರಡು ಟೀಂ ಸ್ಟ್ರಾಂಗ್ ಇದ್ದರೆ ಬೆಟ್ಟಿಂಗ್‍ನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಲಾಗುವುದಿಲ್ಲ. ಒಂದು ವೇಳೆ ಕಣದಲ್ಲಿರುವ ಎರಡು ಟೀಂಗಳಲ್ಲಿ ಒಂದು ಟೀಂ ಡಲ್ ಇದ್ದರೆ ಅಂತಹ ಟೀಂಗಳ ಪರವಾಗಿ ಹಣ ಹಾಕುವವರಿಗೆ ಬೆಟ್ಟಿಂಗ್ ಮಾಡಿದ ಹಣಕ್ಕಿಂತ ದುಪ್ಪಟ್ಟು ನೀಡಲಾಗುವುದು ಎಂದು ಯುವಕರಿಗೆ ಆಮಿಷವೊಡ್ಡಲಾಗುತ್ತಿದೆ.
ಇದೀಗ ನಡೆಯುತ್ತಿರುವ ಹೈ ವೋಲ್ಟೇಜ್ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಆಡುವವರಿಗೆ ಪ್ರತಿದಿನ ಹಬ್ಬವೋ ಹಬ್ಬವಾಗಿದೆ. ಬೆಟ್ಟಿಂಗ್ ಆಡುವವರಿಗೆ ಸಾವಿರ ರೂ.ಗೆ 10 ರೂ. ವರೆಗೆ ಹಣ ನೀಡಲಾಗುವುದು ಎಂದು ಬುಕ್ಕಿಗಳು ಆಮಿಷ ನೀಡಿ ಬೆಟ್ಟಿಂಗ್ ಆಡಿಸುತ್ತಿದ್ದಾರೆ ಎನ್ನುವ ಆರೋಪಗಳು ಬೆಟ್ಟಿಂಗ್ ಜಾಲದಲ್ಲಿ ಬಿದ್ದಿರುವ ಯುವಕರು ಪೋಷಕರಿಂದ ಕೇಳಿ ಬರುತ್ತಿದೆ.
ಕ್ರಿಕೆಟ್ ಬೆಟ್ಟಿಂಗ್ ಜಾಲ ಅಂತರ್ಜಾಲದಲ್ಲಿ ವಿಸ್ತರಣೆಯಾಗಿರುವುದರಿಂದ ಬುಕ್ಕಿಗಳು ಸೇರಿ ಬೆಟ್ಟಿಂಗ್ ಆಡುವವರಿಗೆ ಟಿಪ್ಸ್ ನೀಡುವ ಸಲುವಾಗಿಯೇ ಕೆಲವು ಅಧಿಕೃತ ವೆಬ್‍ಸೈಟ್‍ಗಳು ಹುಟ್ಟಿಕೊಂಡಿವೆ. ಇನ್ನೂ ಕೆಲ ವೆಬ್‍ಸೈಟ್‍ಗಳು ಮಾನ್ಯತೆ ಪಡೆದುಕೊಳ್ಳದೇ ಟಿಪ್ಸ್ ನೀಡುವ ಮೂಲಕ ತೆರಿಗೆ ವಂಚಿಸುತ್ತಿದೆ. ಬೆಟ್ಟಿಂಗ್ ಆಡುವವರು ಮೋದಲೇ 30 ಸಾವಿರ ರೂ. ಬುಕ್ಕಿಗಳಲ್ಲಿ ಡಿಪಾಜೀಟ್‍ನ್ನು ಮಾಡಿದಾಗ ಮಾತ್ರ ಬೆಟ್ಟಿಂಗ್ ಆಡಲು ಸಾಧ್ಯ. ಬೆಟ್ಟಿಂಗ್ ಆಡಿದವರು ಬುಕ್ಕಿಗಳಿಗೆ ನೇರವಾಗಿ ನಗದು ರೂಪದಲ್ಲಿ ಹಣ ನೀಡದೇ ಆನ್‍ಲೈನ್ ಮೂಲಕ ಪೇ-ಟಿಎಂ, ಗೂಗಲ್-ಪೇ, ಫೋನ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿಯೇ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ.


ಜೂಜಿನ ಗೀಳಿಗೆ ಬಿದ್ದಿರುವ ಯುವಕರ ಕುಟಂಬಗಳು ಹಾಳಾಗಿ ಹೋದ ನಿದರ್ಶನಗಳಿವೆ. ಕೆಲವರು ಬೆಟ್ಟಿಂಗ್‍ನಲ್ಲಿ ಸೋತು ಸುಣ್ಣವಾಗಿ ಸೋತ ಹಣವನ್ನು ಹೊಲ, ಮನೆ ಮಾರಿ ತೀರಿಸಿ ಬೆಟ್ಟಿಂಗ್ ದಂಧೆ ಬೇಡವೇ ಬೇಡ ಎಂದು ದೂರ ಸರಿದಿದ್ದಾರೆ. ಇನ್ನೂ ಕೆಲವರಂತ್ತೂ ಬೆಟ್ಟಿಂಗ್ ದಂಧೆಯಲ್ಲಿ ಬಿದ್ದು ಲಕ್ಷಾಂತರ ರೂ. ಸಾಲ ಶೋಲ ಮಾಡಿ ಹಣ ಮರುಪಾವತಿಸಲಾಗದೇ ಊರು ಬಿಟ್ಟು ಹೋಗಿ 8-10 ವರ್ಷಗಳಾದರೂ ಇನ್ನೂ ಬಂದಿಲ್ಲ. ಅವರ ಮನೆಯವರು ನನ್ನ ಮಗ ಇವತ್ತು ಬರುತ್ತಾನೇ ನಾಳೆ ಬರುತ್ತಾನೆ ಎಂದು ಕಾಯುತ್ತಾ ಕುಳಿತಿರುವುದು ಒಂದೇಡೆಯಾದರೇ, ಬೆಟ್ಟಿಂಗ್‍ನಲ್ಲಿ ಸೋತು ಹಣ ನೀಡಿಲ್ಲ ಅವನು ಬರಲಿ ಕುಂದ್ರಸ್ ಹಾಕಿ ಹಣ ವಸೂಲಿ ಮಾಡೋಣ ಎಂದು ಕಾಯುತ್ತಿದ್ದಾರೆ. ಆದ್ದರಿಂದ ಕ್ರಿಕೆಟ್ ಬೆಟ್ಟಿಂಗ್‍ನಂತಹ ಜೂಜಾಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ತಾಲೂಕಿನಾದ್ಯಂತ ಕೇಳಿಬಂದಿದೆ.

ಚಿತ್ತಾಪುರ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ. ಐಪಿಎಲ್ ಬೆಟ್ಟಿಂಗ್ ದಂಧೆ ಕುರಿತು ಇಲ್ಲಿಯವರೆಗೆ ಯಾವುದೇ ಪ್ರಕರಣ ಕೂಡಾ ದಾಖಲಾಗಿಲ್ಲ. ಒಂದು ವೆಳೆ ಬೆಟ್ಟಿಂಗ್ ದಂಧೆ ಅಂತಹ ಪ್ರಕರಣಗಳು ಕಂಡು ಬಂದರೇ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದಂಧೆಯಲ್ಲಿ ಯಾರೇ ತೊಡಗಿದ್ದರೂ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ.
-ಮಂಜುನಾಥರೆಡ್ಡಿ ಪಿಎಸ್‍ಐ.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಿಂದಾಗಿ ಯುವಕರು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೆ ಅಡ್ಡ ದಾರಿ ತುಳಿಯುತ್ತಿದ್ದಾರೆ. ಹೀಗಾಗಿ ಇದನ್ನು ಶೀಘ್ರ ತಡೆಗಟ್ಟಬೇಕು. ಇಲ್ಲದಿದ್ದರೇ ಮಕ್ಕಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
-ಸುರೇಶ ಕುಲಕರ್ಣಿ ಸ್ಥಳೀಯ ನಿವಾಸಿ.

ತಾಲೂಕಿನಲ್ಲಿ ಐಪಿಎಲ್ ಗ್ಯಾಂಬ್ಲಿಂಗ್ ನಡೆಯುತ್ತಿದೆ. ಜೂಜಾಟದ ಕ್ಲಬ್ ಶುರುವಾಗಿದೆ. ಮಟಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗಾಂಜಾ ಪತ್ತೆಯಾಗುತ್ತಿದೆ. ಇದರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆದ್ದರಿಂದ ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲಾ ಅಕ್ರಮ ಮತ್ತು ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಬೇಕು. ಒಂದು ವೇಳೆ ಕಡೆಗಣಿಸಿದರೆ ಶಿಸ್ತಿನ ಕ್ರಮ ಅನಿವಾರ್ಯವಾಗಿದೆ.
ಪ್ರಿಯಾಂಕ್ ಖರ್ಗೆ ಮಾಜಿ ಸಚಿವ, ಶಾಸಕ.

 

Comments are closed.

Don`t copy text!