ಕಳಪೆ ಸೋಯಾಬಿನ್ ಬೀಜಕ್ಕೆ ರೈತರ ಆಕ್ರೋಶ: ಪರಿಹಾರಕ್ಕೆ ಒತ್ತಾಯ
ಆಳಂದ ತಾಲೂಕು ಆಡಳಿತ, ಆರ್‍ಎಸ್‍ಕೆ ಮುಂದೆ ಮಿಂಚಿನ ಪ್ರತಿಭಟನೆ
ಆಳಂದ: ಕಳಪೆ ಸೋಯಾಬೀನ್ ಬೀಜ ವಿತರಣೆಯಿಂದಾದ ನಷ್ಟ ಭರಿಸಬೇಕು ಎಂದು ರೈತರ ನಡೆಸಿದ ಮಿಂಚಿನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ತಹಸೀಲ್ದಾರರಿಗೆ ಸೂಚಿಸಿದರು.
ಆಳಂದ: ತಾಲೂಕಿನಲ್ಲಿ ಆಳಂದ ರೈತ ಸಂಪರ್ಕ ಕಚೇರಿಯಿಂದ ಪಡೆದು ಬಿತ್ತನೆಗೆ ಬಳಸಿದ ಸೋಯಾಬಿನ್ ಬೀಜಗಳು ಮೊಳಕೆ ಒಡೆಯದಿರುವ ಹಿನ್ನೆಲೆಯಲ್ಲಿ ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರು ತಾಲೂಕಿನ ಮಂಗಳವಾರ ಆಳಂದ ರೈತ ಸಂಪರ್ಕ ಕೇಂದ್ರ ಹಾಗೂ ತಹಸಿಲ್ದಾರ್ ಕಚೇರಿ ಎದುರು ಮಿಂಚಿನ ಪ್ರತಿಭಟನೆ ನಡೆಸಿದರು.
ಐದನೂರಕ್ಕೂ ಹೆಚ್ಚು ರೈತರು ಕಳಪೆ ಬೀಜದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಟಿಯಾಗದೇ ನಷ್ಟ ಅನುಭವಿಸಿದ್ದು ಆಡಳಿತ ವ್ಯವಸ್ಥೆಯನ್ನು ನಾಚಿಸುವಂತೆ ಮಾಡಿದೆ. ಇಂಥ ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ಹಾಗೂ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಿ ಕ್ರಮ ಜರುಗಿಸಿ ರೈತರಿಗೆ ಪರಿಹಾರ ಕೊಡಬೇಕು ಎಂದು ಸಂತ್ರಸ್ತ ರೈತರು ಆಗ್ರಹಿಸಿದರು.
ಪ್ರತಿಭಟನೆಗೆ ಬೆಂಬಲಿಸಿ ಭಾಗವಹಿಸಿದ್ದ ಮಾಜಿ ಶಾಸಕ ಸುಭಾಸ್ ಗುತ್ತೇದಾರ್ ಮಾತನಾಡಿ, ಕಳಪೆ ಬೀಜದಿಂದ ರೈತರಿಗೆ ಉಂಟಾದ ಆರ್ಥಿಕ ನಷ್ಟಕ್ಕೆ ಬೀಜದ ಕಂಪನಿಯಿಂದ ಸರ್ಕಾರವು ತಕ್ಷಣ ಪರಿಹಾರ ಒದಗಿಸಬೇಕೆಂದು ಅಲ್ಲದೆ, ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಜರುಗಿಸಿ ಬಿತ್ತನೆಯಿಂದ ಉಂಟಾದ ಹಾನಿ ಹಾಗೂ ಉತ್ಪಾದನೆಯ ಸಂಭಾವ್ಯ ಮೌಲ್ಯವನ್ನು ಆಧರಿಸಿ ಪರಿಹಾರ ನೀಡುವಂತೆ ಆಗ್ರಹಿಸಿದರು. “ಕಳಪೆ ಬೀಜದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ರೈತರಿಗೆ ಉತ್ಪಾದನೆಯ ಮೌಲ್ಯಕ್ಕೆ ತಕ್ಕಂತೆ ಪರಿಹಾರ ಒದಗಿಸಬೇಕು,” ಎಂದು ಗುತ್ತೇದಾರ ಒತ್ತಾಯಿಸಿದರು.
ಮಿಂಚಿನ ಪ್ರತಿಭಟನೆಗೆ ಒತ್ತುಕೊಟ್ಟಿದ್ದ ನಮ್ಮ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಸಿ. ಪಾಟೀಲ್, “ರೈತರಿಗೆ ಪರಿಹಾರ ದೊರೆಯದಿದ್ದರೆ, ಬೀಜ ಕಂಪನಿಯ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ” ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಆಳಂದನ ಸಂದೇಶ ಜವಳಿ, ಹನುಮಂತರಾವ್ ಪಾಟೀಲ್, ಪಿಎಲ್‍ಡಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಬಸವರಾಜ್ ಪಾಟೀಲ್ ಬೆಳಮಗಿ, ಹಣಮಂತರಾವ್ ಮಾಲಾಜಿ, ನವ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬಸವಲಿಂಗಪ್ಪ ಆರ್. ಮುದ್ದಾಣಿ, ಖಜೂರಿಯ ವಿಜಯಕುಮಾರ್ ತಡಕಲ್, ಪ್ರಾಚಾರ್ಯ ಮಲ್ಲಿಕಾರ್ಜುನ್ ಪೂಜಾರಿ ಸೇರಿದಂತೆ ಅರವಿಂದ ವಲಯದ ರೈತರು ಭಾಗವಹಿಸಿ, ಸರ್ಕಾರ ಮತ್ತು ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಒಳಗೊಂಡ ರೈತರು ತಹಸೀಲ್ದಾರ ಅವರು ಈ ಕುರಿತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಆರ್‍ಎಸ್‍ಕೆಯಲ್ಲಿ ಅಧಿಕಾರಿ ಸರೋಜಾ, ಸೋಯಾ ಬೀಜದ ಕಂಪನಿಯ ಸಬ್ಬಂದಿಯೊಬ್ಬರು ಹಾಜರಿದ್ದರು. ಕಂಪನಿಯ ಸಿಬ್ಬಂದಿಯೂ ಸೋಯಾ ಬೀಜ ಖರೀದಿಸಿದ ಹಣವನ್ನು ಮರಳಿಕೊಡುವುದಾಗಿ ಹೇಳಿದ್ದರಾದರು, ರೈತರು ಇದಕ್ಕೆ ಒಪ್ಪದೇ ಬಿತ್ತನೆಯಾದ ಬಳಿಕ 30 ಕೆಜಿ ಒಂದು ಪಾಕೇಟಿಗೆ 8-10ಪಾಕೇಟು ಇಳುವರಿ ಉತ್ಪಾದನೆಯಾಗಲಿದೆ ಎಂದು ಹೇಳಿದ್ದು, ಈಗ ಉತ್ಪಾದನೆ ಸೇರಿ ಹಾನಿಯಾದಷ್ಟು ಸೇರಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ವಿಜ್ಞಾನಿಗಳ ಪರಿಶೀಲನೆ ವರದಿ ಬಳಿಕ ಕ್ರಮ:
ರೈತ ಸಂಪರ್ಕ ಕೇಂದ್ರದ ಮೂಲಕ ಸರಾಸ್ ಆಗ್ರೋ ಏಜೆನ್ಸಿಯಿಂದ ವಿತರಿಸಲಾದ ಜೆಎಸ್-335 ಸೋಯಾಬಿನ್ ಬೀಜ ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಒಟ್ಟು 152 ರೈತರಿಗೆ 133 ಕ್ವಿಂಟಲ್ ಬೀಜ ವಿತರಿಸಲಾಗಿದ್ದು, ನರೋಣದಲ್ಲಿ 150 ಕ್ವಿಂಟಲ್ ಬೀಜ ವಿತರಣೆಯಾಗಿತ್ತು. ಆದರೆ, 43 ರೈತರು ಬೀಜದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಾಪಸ್ ಕೊಟ್ಟಿದ್ದಾರೆ. ತಂಬಾಕುವಾಡಿಯಲ್ಲಿ ಒಬ್ಬ ರೈತ ನಾಲ್ಕು ಬ್ಯಾಗ್‍ಗಳಲ್ಲಿ ಎರಡು ಬ್ಯಾಗ್ ಬೀಜವನ್ನು ವಾಪಸ್ ಕೊಟ್ಟಿದ್ದಾನೆ. ಈ ವಿಷಯದ ಕುರಿತು ವಿಜ್ಞಾನಿಗಳ ತಂಡವು ಈಗಾಗಲೇ ಭೇಟಿ ನೀಡಿ, ಬೀಜ ಹಾಗೂ ಬಿತ್ತನೆಯ ಸ್ಥಳವನ್ನು ಪರಿಶೀಲಿಸಿದೆ. ವಿಜ್ಞಾನಿಗಳ ಪರಿಶೀಲನೆಯ ವರದಿಯನ್ನು ಬಂದ ತಕ್ಷಣ ಮೇಲಾಧಿಕಾರಿಗಳಿಗೆ ಸಲ್ಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಾಯಕ ಪ್ರಭಾರಿ ಕೃಷಿ ನಿರ್ದೇಶಕ ಬಿರಾದಾರ್ ಬನ್ಸಿದ್ದಪ್ಪ ಹೇಳಿದ್ದಾರೆ.
Comments are closed.