ಆಳಂದ: ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಹಬ್ಬದಂಗವಾಗಿ ನಾಗದೇವತೆಗೆ ಹೆಣ್ಣುಮಕ್ಕಳು ಸರಣಿಗೆ ನಿಂತು ಪೂಜಿಸಿದರು.
ಆಳಂದ: ಗ್ರಾಮ ದೇವತ ಹನುಮಾನ ದೇವಸ್ಥಾನ ಆಲದ ಮರದ ಬಳಿಯ ನಾಗದೇವರಿಗೆ ತಾಯಂದಿರು ಪೂಜಿಸಿ ಹಾಲೇರದರು.
ಆಳಂದ: ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಾಗ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ನಾಗ ದೇವತೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿರುವುದು ಮಂಗಳವಾರ ಸಾಮಾನ್ಯವಾಗಿ ಕಂಡಿತು.
ಹಬ್ಬದ ಆಚರಣೆಯು ಆಳಂದ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗಿನಿಂದಲೇ ಆರಂಭವಾಯಿತು. ಮಹಿಳೆಯರು ಮತ್ತು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಶುಭ್ರವಾದ ಹೊಸ ಬಟ್ಟೆಗಳನ್ನು ಧರಿಸಿ, ಹೂವಿನಿಂದ ಸಿಂಗರಿಸಿಕೊಂಡು, ನಾಗ ದೇವರಿಗೆ ಹಾಲಿನ ಅಭಿμÉೀಕ ಮಾಡಿದರು. ಗ್ರಾಮೀಣ ಭಾಗಗಳಲ್ಲಿ, ನಾಗರ ಕಲ್ಲುಗಳಿಗೆ ಹಾಲು, ಎಳನೀರು, ಅರಿಶಿನ, ಕುಂಕುಮ ಮತ್ತು ಹೂವಿನಿಂದ ಪೂಜೆ ಸಲ್ಲಿಸಲಾಯಿತು. ಕೆಲವೆಡೆ, ಮನೆಯ ಮುಖ್ಯದ್ವಾರದಲ್ಲಿ ಗೋಮಯದಿಂದ (ಹಸುವಿನ ಸಗಣಿಯಿಂದ) ಮತ್ತು ರಂಗೋಲಿಯಿಂದ ನಾಗದೇವತೆಯ ಚಿತ್ರವನ್ನು ಬಿಡಿಸಿ, ದೀಪ, ಧೂಪ ಮತ್ತು ನೈವೇದ್ಯವನ್ನು ಅರ್ಪಿಸಲಾಯಿತು.
“ನಾಗರ ಪಂಚಮಿ ಬಂದರೆ ಸಾಕು, ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆನಂದದಿಂದ ಆಚರಿಸುತ್ತೇವೆ,” ಎಂದು ಆಳಂದದ ಗೃಹಿಣಿ ಅಶ್ವಿನಿ ಶಿವಕುಮಾರ್ ಪರ್ಗೆ ತಿಳಿಸಿದರು.
ತವರು ಮನೆಯ ಸಂತೋಷದ ಕ್ಷಣಗಳು:
ನಾಗ ಪಂಚಮಿಯ ವಿಶೇಷತೆಯೆಂದರೆ, ಈ ಹಬ್ಬವನ್ನು ಅಣ್ಣ-ತಂಗಿಯರ ಹಬ್ಬವೆಂದೂ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಮರಳಿ, ಕುಟುಂಬದೊಂದಿಗೆ ಸಂಭ್ರಮದ ಕ್ಷಣಗಳನ್ನು ಕಳೆದರು. ತವರು ಮನೆಯಲ್ಲಿ ಸಿಹಿತಿಂಡಿಗಳಾದ ಚಕ್ಕುಲಿ, ಎಳ್ಳುಂಡೆ, ರವೆ ಉಂಡೆ, ಶೇಂಗಾ ಉಂಡೆ, ಹೋಳಿಗೆ ಮತ್ತು ಕರಿಕಡುಬುಗಳನ್ನು ತಯಾರಿಸಿ, ಕೊಬ್ಬರಿಯೊಂದಿಗೆ ‘ಕೊಬ್ಬರಿ ಕುಬುಸ’ವನ್ನು ಸಹೋದರಿಯರಿಗೆ ನೀಡುವ ಸಂಪ್ರದಾಯ ಈ ಬಾರಿಯೂ ಮುಂದುವರಿಯಿತು.
“ತವರಿಗೆ ಬಂದಾಗ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಅಣ್ಣ-ತಮ್ಮಂದಿರ ಜೊತೆಗೆ ಕಾಲ ಕಳೆಯುವುದು, ಒಟ್ಟಿಗೆ ಸಿಹಿತಿಂಡಿಗಳನ್ನು ಸವಿಯುವುದು ಒಂದು ವಿಶೇಷ ಅನುಭವ,” ಎಂದು ತವರು ಮನೆಗೆ ಆಗಮಿಸಿದ ತಾಯಂದಿರು ತಮ್ಮ ಸಂತೋಷವನ್ನು ಹಂಚಿಕೊಂಡರು.
ಕೆಲವೆಡೆ, ಸಹೋದರಿಯರು ತಮ್ಮ ಸಹೋದರರಿಗೆ ಹೂವನ್ನು ಹಾಲಿನಲ್ಲಿ ಅದ್ದಿ ಚಿಮುಕಿಸಿ, ಅರಿಶಿನದಲ್ಲಿ ಅದ್ದಿದ ದಾರವನ್ನು ಬಲಗೈ ಮಣಿಕಟ್ಟಿಗೆ ಕಟ್ಟಿವ ಮೂಲಕ ಸಹೋದರರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದರು.
ಜೋಕಾಲಿ ಮತ್ತು ಸ್ಪರ್ಧೆಗಳ ಸಂಭ್ರಮ: ಹಬ್ಬದಲ್ಲಿ ಜೋಕಾಲಿಯ ಸಂಭ್ರಮವು ವಿಶೇಷ ಆಕರ್ಷಣೆಯಾಗಿತ್ತು. “ನಾಗ ಪಂಚಮಿಯಂದು ಜೋಕಾಲಿಯ ಸಂಭ್ರಮವೇ ಬೇರೆ. ಯುವಕರೆಲ್ಲ ಸೇರಿ ಆಟವಾಡುವಾಗ, ಗ್ರಾಮದಲ್ಲಿ ಒಂದು ಕುಟುಂಬದಂತಹ ವಾತಾವರಣ ನಿರ್ಮಾಣವಾಗುತ್ತದೆ,” ಎಂದು ಚಕ್ರಕಟ್ಟ ಬಳಿ ನಿವಾಸಿ ಶ್ರೀಶೈಲ್ ಉಳ್ಳೆ ತಿಳಿಸಿದರು.
ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಮಹತ್ವ:
ಗ್ರಾಮೀಣ ಭಾಗದಲ್ಲಿ, ನಾಗ ದೇವತೆಯನ್ನು ಭೂಮಿಯ ರಕ್ಷಕರೆಂದು ಪರಿಗಣಿಸಲಾಗುತ್ತದೆ. ಹಾವುಗಳನ್ನು ಪೂಜಿಸುವುದರಿಂದ ಬೆಳೆಗಳ ರಕ್ಷಣೆ ಮತ್ತು ಕೃಷಿಯ ಸಮೃದ್ಧಿಗೆ ಸಹಾಯವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. “ಈ ಹಬ್ಬವು ನಮ್ಮ ಸಂಸ್ಕೃತಿಯ ಒಂದು ಭಾಗ. ಹಿರಿಯರಿಂದ ಬಂದ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಒಡ್ಡುವುದು ನಮ್ಮ ಕರ್ತವ್ಯ,” ಎಂದು ಭೂಸನೂರು ಗ್ರಾಮದ ನೀಲಾಂಬಿಕ ಪಾಟೀಲ್ ತಿಳಿಸಿದರು.
ಶುಭಾಶಯಗಳ ಸಂಭ್ರಮ: ಜನರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಸಾಮಾಜಿಕ ಜಾಲತಾಣಗಳಲ್ಲಿ “ನಾಗ ದೇವತೆಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತುಂಬಲಿ. ನಾಗ ಪಂಚಮಿಯ ಶುಭಾಶಯಗಳು!” ಎಂಬ ಸಂದೇಶಗಳು ವಾಟ್ಸಾಪ್ ಮತ್ತು ಫೇಸ್‍ಬುಕ್‍ನಲ್ಲಿ ಹರಿದಾಡಿದವು.
Comments are closed.