Shubhashaya News

ಮಹಿಳೆಯರಿಗಾಗಿ ಆರೋಗ್ಯ, ಸ್ವಾವಲಂಬನೆಯ ಅರಿವು ಅಗತ್ಯ

ಆಳಂದ: ನರೋಣಾ ಸಮುದಾಯ ಆರೋಗ್ಯ ಕೇಂದ್ರ ಮತ್ತು  ಧರ್ಮಸ್ಥಳ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಹಿಳೆಯರ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕ ಚಂದ್ರಕಾಂತ ಕೋರೆ ಮಾತನಾಡಿದರು.

 

 

ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಳಂದ  ಸಹಯೋಗದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ಆರೋಗ್ಯ ಅರಿವು ನಡೆಯಿತು.

ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಚಂದ್ರಕಾಂತ್ ಕೋರೆ, ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳು ಬ್ಯಾಂಕ್ ವ್ಯವಹಾರ ಹಾಗೂ ಲೋನ್‍ಗಳಿಗೆ ಮಾತ್ರ ಸೀಮಿತವಾಗದೆ, ಸರ್ಕಾರದಿಂದ ಮಹಿಳೆಯರ ಸ್ವಾವಲಂಬನೆಗಾಗಿ ಲಭ್ಯವಿರುವ ಯೋಜನೆ ಟೈಲರಿಂಗ್, ಉಪ್ಪಿನಕಾಯಿ ತಯಾರಿಕೆ, ಅಗರಬತ್ತಿ ತಯಾರಿಕೆಯಂತಹ ತರಬೇತಿಗಳ ಮೂಲಕ ಮಹಿಳೆಯರು ಉದ್ಯೋಗಾವಕಾಶಗಳನ್ನು ಪಡೆಯಬಹುದೆಂದು ಒತ್ತಿ ಹೇಳಿದರು.

ಇನ್ನೊರ್ವ ಆಪ್ತ ಸಮಾಲೋಚಕ ದತ್ತರಾಜ ಪೂಜಾರಿ, ಮಹಿಳೆಯರ ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಪೌಷ್ಟಿಕಾಂಶ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸೌಲಭ್ಯಗಳ ವಿವರಿಸಿ, ವಿಶೇಷವಾಗಿ ಹದಿಹರೆಯದ ಮಹಿಳೆಯರಿಗೆ ಎಚ್‍ಐವಿ/ಏಡ್ಸ್, ಟಿಬಿ ಮತ್ತು ಇತರ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸಿದರು.

ಶಿವಕುಮಾರ್ ಅಲಂಕಾರ, ಆಪ್ತ ಸಮಾಲೋಚಕರು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸ್ತನ ಕ್ಯಾನ್ಸರ್‍ನಂತಹ ಆರೋಗ್ಯ ಸಮಸ್ಯೆಗಳು ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ಇದಕ್ಕೆ ಕಾರಣವಾಗಬಹುದಾದ ದುಶ್ಚಟಗಳು ಮತ್ತು ಪೌಷ್ಟಿಕಾಂಶದ ಕೊರತೆಯ ಬಗ್ಗೆ ಮಾಹಿತಿ ನೀಡಿದರು.

ಡಾ. ಸಾವಿತ್ರಿ ಸಜ್ಜನ್ ಶೆಟ್ಟಿ, ದಂತ ವೈದ್ಯಾಧಿಕಾರಿಗಳು, ತಂಬಾಕು ಸೇವನೆ, ಧೂಮಪಾನ, ಸ್ವಚ್ಛತೆ, ಹಲ್ಲಿನ ಆರೈಕೆ, ಕಣ್ಣಿನ ಆರೋಗ್ಯ ಮತ್ತು ಋತುಮತಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಉಚಿತ ಹಲ್ಲಿನ ತಪಾಸಣೆಯನ್ನು ಸಹ ನಡೆಸಲಾಯಿತು.

ಶ್ರೀಮತಿ ರೇಣುಕಾ ಹಿರೇಕುಡಿ ಅವರು ವಂದಿಸಿದರು. ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದರು.

Comments are closed.

Don`t copy text!