Shubhashaya News

ಜ್ಞಾನಕ್ಕೆ ಸಮಾನವಾದುದ್ದು ಮತ್ತೊಂದಿಲ್ಲ- ಎನ್ ಎಂ ಬಿರಾದಾರ

ಆಳಂದ ಪಟ್ಟಣದ ಪಿಎಸ್‍ಆರ್‍ಎಂಎಸ್ ಬಿ ಎಡ್ ಕಾಲೇಜಿನಲ್ಲಿ ಜರುಗಿದ ಸ್ವಾಗತ ಹಾಗೂ ಪ್ರತಿಭಾ ಪ್ರದರ್ಶನ ಸಮಾರಂಭವನ್ನು ಎನ್ ಎಂ ಬಿರಾದಾರ ಉದ್ಘಾಟಿಸಿದರು.

ಜಗತ್ತಿನಲ್ಲಿ ಜ್ಞಾನಕ್ಕಿರುವುಷ್ಟು ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ ಎಂದು ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಎನ್ ಎಂ ಬಿರಾದಾರ ಅಭಿಪ್ರಾಯಪಟ್ಟರು.

ಶುಕ್ರವಾರ ಆಳಂದ ಪಟ್ಟಣದ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ ಅವಕಾಶಗಳು ಹೇರಳವಾಗಿವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ, ತಯಾರಿ ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ವೃತ್ತಿಯಲ್ಲಿ ಆತ್ಮಸಂತೃಪ್ತಿ ಕಾಣಬಹುದು ಅಲ್ಲದೇ ಸಮಾಜಕ್ಕೆ ಉನ್ನತ ಮಟ್ಟದಲ್ಲಿ ಕಾಣಿಕೆ ನೀಡುವ ಮಹತ್ತರ ಅವಕಾಶ ಒದಗಿ ಬರುತ್ತದೆ ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸಬೇಕು ಜೊತೆಗೆ ಗೌರವಿಸಬೇಕು ಎಂದು ಕರೆ ನೀಡಿದರು.
ಡಾ. ಮಲ್ಲೇಶಪ್ಪ ಕುಂಬಾರ ಮಾತನಾಡಿ, ಜಗತ್ತು ಅವಕಾಶಗಳ ಆಗರ ಇಲ್ಲಿ ಪರಿಶ್ರಮ ಪಟ್ಟವರಿಗಷ್ಟೇ ಫಲ ಸಿಗುತ್ತದೆ ಆದರಿಂದ ಪ್ರತಿಕ್ಷಣವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಸುಭಾಷ ಗುತ್ತೇದಾರ ಮಾತನಾಡಿ, ಹಿಂದುಳಿದ ಭಾಗದ ಹಣೆಪಟ್ಟಿಯನ್ನು ಹೊಡೆದೊಡಿಸುವ ನಿಟ್ಟಿನಲ್ಲಿ ಆಳಂದ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ. ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ನೌಕರರಾಗಿರುವುದು ಹೆಮ್ಮೆಯ ವಿಷಯ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ನಂದಗಾಂವನ ರಾಜಶೇಖರ ಮಹಾಸ್ವಾಮೀಜಿ, ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅಪಾರ ಬೇಡಿಕೆಯಿದೆ ಪ್ರಶಿಕ್ಷಣಾರ್ಥಿಗಳು ಕೌಶಲ್ಯ, ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ತರಬೇತಿ ಅವಧಿಯಲ್ಲಿ ಪರಿಪೂರ್ಣವಾಗಿ ಕಲಿಯಬೇಕು ಎಂದು ಆಶೀರ್ವಚನ ನೀಡಿದರು.
ವಿಕೆಜಿ ಪದವಿ ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಎಂಎಆರ್‍ಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ ವೇದಿಕೆಯ ಮೇಲಿದ್ದರು.
ಪ್ರಶಿಕ್ಷಣಾರ್ಥಿ ಅರುಂಧತಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಪ್ರಶಿಕ್ಷಣಾರ್ಥಿಗಳಾದ ವಿದ್ಯಾ, ರೂಪಾ ನಿರೂಪಿಸಿದರು. ಪ್ರಾಚಾರ್ಯ ಅಶೋಕರೆಡ್ಡಿ ಸ್ವಾಗತಿಸಿ, ವಂದಿಸಿದರು.

Comments are closed.

Don`t copy text!