ರಾಜ್ಯದಲ್ಲಿ ಸಿಬಿಎಸ್ಇ, ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ವಿಷಯ ಕಡ್ಡಾಯಗೊಳಿಸಿರುವ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠದಲ್ಲಿ ಸಿ.ಸೋಮಶೇಖರ್ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದು, ಸಿಬಿಎಸ್ಇ, ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ವಿಷಯವನ್ನು ಕಡ್ಡಾಯಗೊಳಿಸಿರುವ ಸಂಬಂಧ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಆಕ್ಷೇಪಾರ್ಹವಾದ ಕರ್ನಾಟಕ ಭಾಷಾ ಕಲಿಕಾ ಕಾಯ್ದೆ ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ (ಎನ್ಒಸಿ) ನಿಯಮಗಳಿಗೆ ಮಧ್ಯಂತರ ತಡೆ ನೀಡಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ. ಕರ್ನಾಟಕ ಭಾಷಾ ಕಲಿಕಾ ಕಾಯ್ದೆ ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡ ಬೋಧಿಸಬೇಕು ಎಂದು ಸರ್ಕಾರ ಹೇಳಿದೆ.
Comments are closed.