Shubhashaya News

ರಸ್ತೆ ಮಧ್ಯೆ ಭಾವಿ ಮಣ್ಣು ಕುಸಿತ

ನಿಂಬರ್ಗಾ ಮಾರ್ಗದಲ್ಲಿ ಬಸ್ ಸಂಚಾರ ಬಂದ್:

ಆಳಂದ: ನಿಂಬರಗಾ ಮಾರ್ಗದ ಸ್ಥಳವೊಂದರಲ್ಲಿ ಮಣ್ಣು ಕುಸಿತದಿಂದಾಗಿ ರಸ್ತೆ ಕÀಡಿತಗೊಂಡಿದ್ದು ಇದರಿಂದ ಬಸ್ ಸಂಚಾರ ಸ್ಥಗೀತಗೊಂಡಿದೆ.

ಆಳಂದ: ತಾಲೂಕಿನ ನಿಂಬಾ-ನಿಂಬರ್ಗಾ ಮಾರ್ಗದ ಮಧ್ಯಭಾಗದ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಈ ಮಾರ್ಗದಲ್ಲಿ ಪಯಣಿಸುವ ಹಳ್ಳಿಗರಿಗೆ ಇತ್ತೀಚೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಧರ್ಮವಾಡಿಯಿಂದ ನಿಂಬರ್ಗಾ ಮಾರ್ಗದ ಮಧ್ಯದಲ್ಲಿ ದಲಿ ರಸ್ತೆಯ ಪಕ್ಕದ ಬಸಂತವಾಡಿ ರೈತರ ಭಾವಿಯೊಂದರ ಮಣ್ಣು ಕುಸಿದು ರಸ್ತೆಯ ಮಧ್ಯಭಾಗದವರೆಗೆ ಹರಡಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಈ ಘಟನೆಯಿಂದಾಗಿ ಕಲಬುರಗಿಯಿಂದ ಸುಂಟನೂರು ಮಾರ್ಗವಾಗಿ ನಿಂಬರ್ಗಾ ಥಾಂಡಾ ಮತ್ತು ನಿಂಬರ್ಗಾಕ್ಕೆ ಸಂಪರ್ಕಿಸುವ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಈ ಪ್ರದೇಶದ ಜನರು ಮತ್ತು ವಿದ್ಯಾರ್ಥಿಗಳಿಗೆ ಈ ಬಸ್ ಸಂಚಾರ ಬಂದ್ ಆಗಿರುವುದು ತೀವ್ರ ತೊಂದರೆಯನ್ನು ಉಂಟುಮಾಡಿದೆ. ಕಲಬುರಗಿ ಅಥವಾ ನಿಂಬರ್ಗಾಕ್ಕೆ ತೆರಳಬೇಕಾದರೆ ಸಾರಿಗೆ ಸೌಲಭ್ಯವಿಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ಹೋಗಲು ಮತ್ತು ರೈತರಿಗೆ ತಮ್ಮ ದೈನಂದಿನ ಕೆಲಸಗಳಿಗೆ ಈ ಮಾರ್ಗದ ಮೇಲೆ ದೊಡ್ಡ ಅವಲಂಬನೆ ಇದೆ. ಆದರೆ, ರಸ್ತೆಯ ಮಧ್ಯಭಾಗದಲ್ಲಿ ಭಾವಿಯ ಮಣ್ಣು ಕುಸಿದು ಬಿದ್ದಿರುವುದರಿಂದ ಸಂಚಾರ ಸಂಪೂರ್ಣವಾಗಿ ಅಸಾಧ್ಯವಾಗಿದೆ.
ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ದುರಸ್ತಿಗೊಳಿಸಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. “ನಮಗೆ ದಿನನಿತ್ಯದ ಕೆಲಸಕ್ಕೆ ಮತ್ತು ಮಕ್ಕಳ ಶಿಕ್ಷಣಕ್ಕೆ ಬಸ್ ಸಂಚಾರ ತುಂಬಾ ಮುಖ್ಯ. ಈಗ ರಸ್ತೆಯ ಸ್ಥಿತಿ ಹದಗೆಟ್ಟಿರುವುದರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದೇವೆ,” ಎಂದು ಸ್ಥಳೀಯರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ಸಾರಿಗೆ ಸಂಪರ್ಕ ಕಡಿತಗೊಂಡಿದ್ದು, ತುರ್ತು ಕ್ರಮ ಕೈಗೊಂಡು ರಸ್ತೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಜನರ ತೊಂದರೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಸಾರಿಗೆ ಇಲಾಖೆ ಮತ್ತು ಸ್ಥಳೀಯ ಆಡಳಿತದಿಂದ ಶೀಘ್ರ ಪರಿಹಾರ ಒದಗಿಸದೇ ಹೋದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಬಂಜಾರಾ ಕ್ರಾಂತಿದಳ ಅಧ್ಯಕ್ಷ ರಾಜು ಚವ್ಹಾನ ಅವರು ಎಚ್ಚರಿಸಿದ್ದಾರೆ.

Comments are closed.

Don`t copy text!