Shubhashaya News

ರಸ್ತೆಗಿಳಿಯದ ಬಸ್‍ಗಳು ಜನಜೀವನ ಅಸ್ತವ್ಯಸ್ತ

ಸಾರಿಗೆ ಇಲಾಖೆಯ ನೌಕರರು ಕರೆ ನೀಡಿರುವ ಅನಿರ್ದಿಷ್ಠಾವಧಿ ಮುಷ್ಕರದಿಂದ ಇಂದು ಆಳಂದ ಪಟ್ಟಣದಲ್ಲಿ ಯಾವುದೇ ಬಸ್‍ಗಳು ರಸ್ತೆಗಿಳಿಯಲಿಲ್ಲ ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಆಳಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸಗಳು ಇಲ್ಲದೇ ಪ್ರಯಾಣಿಕರು ಪರಿತಪಿಸುವಂತಾಯಿತು. ಕಲಬುರಗಿ ಮತ್ತು ಬೇರೆ ಬೇರೆ ಕಡೆ ಹೋಗಲು ಬಂದಿದ್ದ ಪ್ರಯಾಣಿಕರು ಸಾರಿಗೆ ವ್ಯವಸ್ಥೆ ಇಲ್ಲದಿದ್ದಕ್ಕೆ ಹಿಡಿ ಶಾಪ ಹಾಕಿದರು. ಬಸ್ ನಿಲ್ದಾಣದಲ್ಲಿನ ಆಸನಗಳು ಖಾಲಿ ಖಾಲಿ ಕಾಣುತ್ತಿದ್ದವು. ಊರಿಂದ ಊರಿಗೆ ಹೋಗಬೇಕಾದ ಶಿಕ್ಷಕರು ಸಾರಿಗೆ ಸಂಪರ್ಕವಿಲ್ಲದೇ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತು.

ಇನ್ನೂ ಬಸ್ ನಿಲ್ದಾಣದಲ್ಲಿ ಹೊಟೆಲ್ ನಡೆಸುತ್ತಿರುವ ಹೊಟೆಲ್ ಮಾಲಿಕರು ಗ್ರಾಹಕರಿಲ್ಲದೇ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೇ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಿ ಎಂದು ಹೇಳಿದರು.

ಇನ್ನೂ ಬಸ್ ಘಟಕದಲ್ಲಿ ಬಸ್‍ಗಳು ಸರತಿ ಸಾಲಿನಲ್ಲಿ ನಿಂತಿರುವ ಚಿತ್ರ ಕಂಡು ಬಂತು. ಚಾಲಕರು ನಿರ್ವಾಹಕರು ಸೇವೆಗೆ ಹಾಜರಾಗದೇ ಅಲ್ಲಲ್ಲಿ ಕುಳಿತಿರುವ ಚಿತ್ರಗಳು ಕಂಡು ಬಂದವು.
ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರ ಹಿತ ಕಾಪಾಡುವಲ್ಲಿ ಸರ್ಕಾರ ಒಂದು ಗಟ್ಟಿ ನಿರ್ಧಾರಕ್ಕೆ ಬರಲಿ ಅಲ್ಲದೇ ಸಾಧ್ಯವಿರುವ ಅವರ ಬೇಡಿಕೆಗಳನ್ನು ಈಡೇರಿಸಲಿ. ಅವರಿಗೂ ಕುಟುಂಬವಿದೆ ಎನ್ನುವುದನ್ನು ಸರ್ಕಾರ ಅರಿಯಲಿ.
ಒಟ್ಟಿನಲ್ಲಿ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸಿ ಶೀಘ್ರವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎನ್ನುವುದು ಶುಭಾಶಯ ಸುದ್ದಿ ವಾಹಿನಿಯ ಕಳಕಳಿ.

Comments are closed.

Don`t copy text!