ಶಿಕ್ಷಕರಾಗಿ ಹೊರಹೊಮ್ಮಲು ಬಿ.ಇಡಿ ಕೋರ್ಸ್ ಪೂರಕ: ಚಿಂಚನಸೂರ
ಬಿ.ಇಡಿ ಕೋರ್ಸ್ಗೆ ಪ್ರವೇಶ ಪ್ರಾರಂಭವಾಗಿದ್ದು ಎಲ್ಲ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳಬೇಕು.
ಚಿತ್ತಾಪುರ: ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಪಟ್ಟಣದಲ್ಲಿ ಕಳೆದ 2005ರಲ್ಲಿ ಬಿ.ಇಡಿ ಕೋರ್ಸ್ ಪ್ರಾರಂಭ ಮಾಡುವ ಮೂಲಕ ತಾಲೂಕಿನಲ್ಲಿ ಒಂದು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಈ ಭಾಗದಲ್ಲಿ ಅನೇಕರು ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬಿ.ಇಡಿ ಕೋರ್ಸ್ಗೆ ಪ್ರವೇಶ ಪ್ರಾರಂಭವಾಗಿದ್ದು ಎಲ್ಲ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಈಗಾಗಲೇ ಶಿಕ್ಷಣ ಸಂಸ್ಥೆಯಡಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ, ಡಿ.ಇಡಿ, ಬಿ.ಇಡಿ ಕಾಲೇಜುಗಳ ಜೊತೆ ಸಿಬಿಎಸ್ಇ ಶಾಲೆ ಕೂಡ ಬಹಳ ಯಶಸ್ವಿಯಾಗಿ ನಡೆದಿವೆ. ಇಲ್ಲಿ ಕಲೆತ ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳಲ್ಲಿದ್ದಾರೆ ಎಂದರು.
ಪಟ್ಟಣದ ಹೊರವಲಯದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳ ಜೊತೆಗೆ ಉತ್ತಮ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಅನುಭವಿ ಉಪನ್ಯಾಸಕರು ಕೂಡ ಇದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಮತ್ತು ಕೊರತೆ ಆಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಲಾಭದ ದೃಷ್ಠಿಯಿಂದ ಶಿಕ್ಷಣ ಸಂಸ್ಥೆ ಆರಂಭಿಸಿಲ್ಲ. ಈ ಭಾಗದಲ್ಲಿ ಬಡ ಕೂಲಿಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು ನಗರ ಪ್ರದೇಶಕ್ಕೆ ಹೋಗಿ ಅಧಿಕ ಶುಲ್ಕ ಭರಿಸಿ ಶಿಕ್ಷಣ ಪಡೆಯಲಿಕ್ಕೆ ಆಗೋಲ್ಲ. ಹೀಗಾಗಿ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದದ್ದನ್ನು ಮನಗೊಂಡು ಇಲ್ಲಿಯೇ ಶಿಕ್ಷಣ ಸಂಸ್ಥೆ ಆರಂಭಿಸಿ ಯಾವುದೇ ಡೋನೇಷನ್ ಪಡೆಯದೇ ಸರ್ಕಾರಿ ಶುಲ್ಕ ಮಾತ್ರ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಅತಿ ಹಿಂದುಳಿದ ಚಿತ್ತಾಪುರ ತಾಲೂಕಿನಲ್ಲಿ ಶಿಕ್ಷಕರನ್ನಾಗಿ ತಯ್ಯಾರು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಏಕೈಕ ಸಂಸ್ಥೆ ಅದು ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಎಂದು ಹೆಮ್ಮೆಯಿಂದ ಹೇಳಬಹುದು. ಹೈದ್ರಾಬಾದ ಕರ್ನಾಟಕ ಭಾಗದ ಮಕ್ಕಳು ಶೈಕ್ಷಣಿಕ ಸೌಲಭ್ಯ ಸಿಗದೇ ಇರುವುದರಿಂದ ಹಲವಾರು ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದರೂ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಈ ಭಾಗವನ್ನು ಶೈಕ್ಷಣಿಕವಾಗಿ ಸದೃಢವಾಗಿ ಮಾಡಬೇಕು ಎನ್ನುವ ಏಕೈಕ ಉದ್ದೇಶದಿಂದ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಡಿ.ಇಡ್, ಬಿ.ಇಡ್ ದಂತಹ ಎಲ್ಲಾ ತರಗತಿಗಳು ಒಂದೇ ಕಡೆ ಸಿಗುವಂತೆ ಮಾಡಲಾಗಿದೆ. ಅದರಲ್ಲೂ ಸಿಬಿಎಸ್ಸಿ ತರಗತಿಗಳನ್ನು ಆರಂಭಿಸುವುದರ ಮೂಲಕ ಸೆಂಟ್ರಲ್ ಸಿಲೆಬೆಸ್ ಕೂಡಾ ಇಲ್ಲಿ ಸಿಗುವಂತೆ ಮಾಡಲಾಗಿದೆ ಎಂದು ಹೇಳಿದರು.