ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಮಂಗಳವಾರ ನಗರದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಾಡಿ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲಾ ತಂಡವು ಎಲ್ಲಾ ಎದುರಾಳಿ ತಂಡಗಳನ್ನು ಸೋಲುಣಿಸುವ ಮೂಲಕ ಸತತ ಮೂರು ಗೆಲುವಿನೊಂದಿಗೆ ಹ್ಯಾಟ್ರಿಕ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಹೋಬಳಿ ಮಟ್ಟದಲ್ಲಿ ಗೆದ್ದು ನಂತರ ತಾಲೂಕು ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ಈಗ ಜಿಲ್ಲಾ ಮಟ್ಟದಲ್ಲೂ ಅಜೆಯ ಓಟ ಮುಂದುವರಿಸಿದೆ. ಯಾವುದೇ ಹಂತದಲ್ಲೂ ಗೆಲುವನ್ನು ಬೇರೆಯವರಿಗೆ ಬಿಟ್ಟುಕೊಡದೆ, ವಾಲಿ ಬಾಲ್ ಕ್ರೀಡೆಯಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿರುವುದು ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಈ ಗೆಲುವಿನೊಂದಿಗೆ ವಾಡಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ತಂಡವು ಮುಂದಿನ ತಿಂಗಳು ನಡೆಯಲಿರುವ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದೆ. ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಅವರ ತರಬೇತಿ ಮತ್ತು ವಿದ್ಯಾರ್ಥಿಗಳ ಸಾಧನೆಗೆ, ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ್, ಶಿಕ್ಷಕರು ಹಾಗೂ ಪೋಷಕರು ಹರ್ಷ ವಕ್ತಪಡಿಸಿದ್ದಾರೆ.
ಶ್ರಮಕ್ಕೆ ಸಿಕ್ಕ ಪ್ರತಿಫಲ: ಮಕ್ಕಳಲ್ಲಿ ಪ್ರತಿಭೆ ಇದೆ. ಗೆಲುವಿನ ಛಲವಿದೆ. ನಿರಂತರ ಅಭ್ಯಾಸ ಅಪಾರ ಪರಿಶ್ರಮದಿಂದ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಆಗಿಲು ಸಾಧ್ಯವಾಗಿದೆ. ಈ ಗೆಲುವಿನ ಓಟ ವಿಭಾಗ ಮಟ್ಟದಲ್ಲೂ ಮುಂದುವರಿಯುವ ವಿಶ್ವಾಸವಿದೆ.
_ ಶ್ರೀನಾಥ ಇರಗೊಂಡ (ದೈಹಿಕ ಶಿಕ್ಷಕ ಅಂಬೇಡ್ಕರ್ ವಸತಿ ಶಾಲೆ)