ಕಲಬುರಗಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಘೋಷಣೆ ಮಾಡಿದ್ದು, ಅದರಂತೆ 2026ರ ಅಕ್ಟೋಬರ್ 23ಕ್ಕೆ ಮತದಾನ ಮತ್ತು ಅಕ್ಟೋಬರ್ 27ಕ್ಕೆ ಮತ ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಲಿಖಿತವಾಗಿ ಅಥವಾ ದೂರವಾಣಿ ಮುಖಾಂತರ ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ದೂರು ಮೇಲ್ವಿಚಾರಣಾ ಕೋಶವನ್ನು ತೆರೆಯಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್ ತಿಳಿಸಿದ್ದಾರೆ.
ಈ ದೂರು ನಿರ್ವಹಣಾ ಕೋಶವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ದೂರು ಸಲ್ಲಿಸಬಯಸುವವರು ದೂರವಾಣಿ ಸಂಖ್ಯೆ 08472-200255 ಮೂಲಕ ಕರೆ ಮಾಡಿ ತಮ್ಮ ದೂರನ್ನು ಸಲ್ಲಿಸಬಹುದಾಗಿದೆ. ಇದಲ್ಲದೇ ಲಿಖಿತವಾಗಿ ಪತ್ರ ಮೂಲಕ ಸಹ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಚುನಾವಣಾ ಶಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಸ್ಟೇಷನ್ ರಸ್ತೆ, ಕಲಬುರಗಿ 585102 ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.