ಕಲಬುರಗಿ : ರಾಜ್ಯದಲ್ಲಿ ಅತ್ಯಂತ ಹೆಚ್ಚು ಕ್ರಿಮಿನಲ್ ಪ್ರಕರಣ, ಪೊಲೀಸರಿಂದಲೇ ಲಂಚ ಪ್ರಕರಣ, ಕಳ್ಳ ನೋಟಿನ ದಂಧೆ, ಅಮಾಯಕರ ವಿರುದ್ಧ ಪ್ರಕರಣ ದಾಖಲು, ಬ್ಲಾಸ್ಟ್ ಪ್ರಕರಣ ಮುಚ್ಚಿಟ್ಟ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸದೆ ಗೃಹ ಸಚಿವರ ಜಿಲ್ಲೆ ಕ್ರಿಮಿನಲ್ ಅಡ್ಡೆಯಾಗುತ್ತಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರವಾಗಿ ಖಂಡಿಸಿದ್ದಾರೆ.
ಕಲಬುರಗಿ ಜಿಲ್ಲೆ ರಾಜ್ಯ ಗೃಹ ಸಚಿವರ ತವರು ಜಿಲ್ಲೆಯಾಗಿದ್ದು ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ವೈಫಲ್ಯ ಕಂಡು ಕ್ರಿಮಿನಲ್ ಚಟುವಟಿಕೆಗಳ ಅಡ್ಡೆಯಾಗುತ್ತಿರುವುದು ದುರದೃಷ್ಟಕರ ಮತ್ತು ಇಡೀ ರಾಜ್ಯಕ್ಕೆ ಅಪಮಾನಕರ ಸಂಗತಿ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಾತನೂರು ಗ್ರಾಮದ ರೇವಮ್ಮ ಭೀಮರಾಯ ಗಡೇದ ಮತ್ತು ಅವರ ಮಗಬಾ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು ಅವರ ವಿರುದ್ಧ ದೂರು ಸಲ್ಲಿಸಲು ಠಾಣೆಗೆ ತೆರಳಿದರೂ ದೂರು ದಾಖಲಿಸದಿರುವುದನ್ನು ಕಂಡು ನೊಂದುಕೊಂಡ ರೇವಮ್ಮ ಠಾಣೆಯಲ್ಲೇ ವಿಷ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಇದರ ವಿರುದ್ಧ ವಿವಿಧ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟಿಸಿ ಪೊಲೀಸರು ವಿರುದ್ಧ ಕಿಡಿಕಾರಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಕಲಬುರಗಿ ರಾಜರಾಜೇಶ್ವರಿ ನಗರದ ಮನೆಯೊಂದರಲ್ಲಿ ಪೊಲೀಸರ ದಾಳಿ ವೇಳೆ 500 ರೂಪಾಯಿಗಳ 28 ನೋಟು ಸೇರಿದಂತೆ ಒಟ್ಟು 14 ಸಾವಿರ ಖೋಟಾ ನೋಟು ಪತ್ತೆ ನೋಟ್ ಪ್ರಿಂಟಿಂಗ್ ಯಂತ್ರ ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಿ ಈಗಾಗಲೇ ಇಬ್ಬರನ್ನು ಬಂಧಿಸಿದಲಾಗಿದೆ. ಒಬ್ಬ ಪರಾರಿಯಾಗಿರುವ ಘಟನೆ ತುಂಬಾ ನಾಚಿಕೆಗೇಡಿನ ವಿಷಯವಾಗಿದೆ.
ಕಲಬುರಗಿಯ ನಂದೂರು ಕೈಗಾರಿಕಾ ಪ್ರದೇಶದಲ್ಲಿ ಸನಾ ಟಯರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟಗೊಂಡು ಉತ್ತರಪ್ರದೇಶ ಗೋರಖ್ ಪುರ ಮೂಲದ ಕಾರ್ಮಿಕ ಸಂಗ್ರಾಮ್ ಸಿಂಗ್ ಸಾವನ್ನಪ್ಪಿದ್ದು ಮತ್ತೊಬ್ಬ ಕಾರ್ಮಿಕ ರಾಮ ಬದಾನ್ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಭವಿಸಿ ನಾಲ್ಕು ದಿನಗಳಾದರು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸದೆ ತೀವ್ರ ನಿರ್ಲಕ್ಷ್ಯವಹಿಸಿದ್ದು ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಡಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಎಆರ್ ಪೊಲೀಸ್ ಕಾನ್ಸ್ಟೇಬಲ್ ರುದ್ರಗೌಡ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಕೂಡಾ ಸಂಭವಿಸಿದೆ.ಕಲಬುರಗಿ ನಗರದ ಪೊಲೀಸ್ ಠಾಣೆಯಲ್ಲಿ ಲಂಚ ಪ್ರಕರಣ ಒಂದರಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಿ ಈಗಾಗಲೇ ಅಮಾನತು ಮಾಡಿ ಆದೇಶ ನೀಡಲಾಗಿದೆ. ಹೀಗೆ ಜಿಲ್ಲೆಯ ಪೊಲೀಸರು ಕಾನೂನು ಭಂಜಕರಾಗಿ ಇಡೀ ಜಿಲ್ಲೆಯು ಕ್ರಿಮಿನಲ್ ಅಡ್ಡೆಯಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲೆಯ ಶಾಂತಿ ನೆಮ್ಮದಿ ಹಾಳು ಮಾಡುತ್ತಿರುವ ಬಗ್ಗೆ ಗಮನ ಸೆಳೆದರೂ ರಾಜ್ಯ ಗೃಹ ಸಚಿವರು ಮಾತ್ರ ಈ ಬಗ್ಗೆ ಚಕಾರವೆತ್ತುತಿಲ್ಲ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದರೂ ಗೃಹ ಸಚಿವರು ಮಾತ್ರ ಪ್ರತಿಪಕ್ಷದವರ ವಿರುದ್ಧ ಸುಖಾಸುಮ್ಮನೆ ಆರೋಪ ಹೊರಿಸಿ ಬಾಯಿಚಪಲ ತೀರಿಸಿಕೊಳ್ಳುತ್ತಿದ್ದಾರೆ ಎಂದು ಡಾ. ಉಮೇಶ್ ಜಾಧವ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.