Shubhashaya News

ಚಿತ್ತಾಪುರ ಬರ ಪರಿಸ್ಥಿತಿ; ಜಂಟಿ ಸಮೀಕ್ಷೆಗೆ ತಂಡ ರಚನೆ

ಚಿತ್ತಾಪುರ; ಪ್ರಸ್ತುತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಬರ ಪರಿಸ್ಥಿತಿ ಆವರಿಸಿದೆ.
ಮುಂಗಾರು ಬೆಳೆ ಹಾನಿಯಿಂದ ರೈತರು ತೀವ್ರ ಆರ್ಥಿಕ ತೊಂದರೆಗೀಡಾಗಿದ್ದಾರೆ. ಹಿಂಗಾರು ಮಳೆಯು ಕೈಕೊಟ್ಟಿದ್ದರಿಂದ ಬರದ ಛಾಯೆ ಮತ್ತಷ್ಟು ಭೀಕರವಾಗಲಿದೆ. ರಾಜ್ಯ ಸರ್ಕಾರ ಘೋಷಿಸಿರುವ ಬರಘೋಷಣೆಯ ಎರಡನೇ ಪಟ್ಟಿಯಲ್ಲಿ ಚಿತ್ತಾಪುರ ತಾಲೂಕಿದ್ದು ಬರ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆಗೆ ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.
ತಾಲೂಕಿನಲ್ಲಿ ಒಟ್ಟು 64 ಗ್ರಾಮಗಳಿದ್ದು, ಶೇ 10ರಷ್ಟು
ಗ್ರಾಮಗಳು, ಅಂದರೆ ಏಳು ಗ್ರಾಮಗಳು ನಿಯಮಾನುಸಾರ ಆಯ್ಕೆಯಾಗುತ್ತವೆ.
ಆಯ್ಕೆಯಾದ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ರಚಿಸಿದ್ದು, ಜಂಟಿ ಸಮೀಕ್ಷೆ ನಡೆಸುತ್ತಾರೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಪ್ರತಿಕ್ರಿಯಿಸಿದರು.
ತಾಲೂಕಿನಲ್ಲಿ ತೊಗರಿ ಮತ್ತು ಹತ್ತಿ ಬೆಳೆಯನ್ನು ಬರ ಪರಿಸ್ಥಿತಿಯ ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಮಾಡಲಾದ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಲಿರುವ ಅಧಿಕಾರಿಗಳ ತಂಡವು ಜಮೀನಿನಲ್ಲಿನ ಬೆಳೆಯ ಪರಿಸ್ಥಿತಿ ಕುರಿತು ಮೊಬೈಲ್ ಆ್ಯಪ್‌ನಲ್ಲಿಯೇ ಮಾಹಿತಿ ಅಪ್ಲೋಡ್ ಮಾಡಿ ವರದಿ ನೀಡುತ್ತಾರೆ. ಅದನ್ನು ಸಂಬಂಧಿಸಿದ ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನ 64 ಗ್ರಾಮಗಳ ಪೈಕಿ ಶೇ 10 ರಷ್ಟು (ಏಳು ಗ್ರಾಮಗಳು) ಗ್ರಾಮಗಳಲ್ಲಿ ನಡೆಯುವ ಜಂಟಿ ಸಮೀಕ್ಷೆಯಲ್ಲಿ ಜಮೀನುಗಳಲ್ಲಿ ಲಭಿಸುವ ಬರ ಸ್ಥಿತಿಗತಿ, ಬೆಳೆಹಾನಿಯ ಮಾಹಿತಿ ಹಾಗೂ ಸಮೀಕ್ಷೆಯ ನಂತರ ಸಲ್ಲಿಕೆಯಾಗುವ ವರದಿಯು ತಾಲೂಕಿನ ಎಲ್ಲಾ 64 ಗ್ರಾಮಗಳಿಗೆ ಅನ್ವಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಪ್ರಕಟಿಸಿರುವ ಬರ ಪೀಡಿತ ಪ್ರದೇಶಗಳ ಎರಡನೇ ಪಟ್ಟಿಯಲ್ಲಿ ತಾಲೂಕಿದ್ದು ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ. ಸಮೀಕ್ಷೆ ನಡೆಸುವ ಅಧಿಕಾರಿಗಳ ತಂಡವು ಸರಿಯಾಗಿ ಸಮೀಕ್ಷೆ ನಡೆಸಿ ಲೋಪದೋಷವಿಲ್ಲದಂತೆ ವರದಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

Leave A Reply

Your email address will not be published.