ಗ್ರಂಥಾಲಯ ಬಳಕೆಯಿಂದ ಜ್ಞಾನ ವೃದ್ಧಿ, ವ್ಯಕ್ತಿತ್ವ ವಿಕಸನ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ
ಸಿಯುಕೆಯಲ್ಲಿ ‘ಜ್ಞಾನಸೇತು’ ಕೇಂದ್ರ, ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ ವಿಶೇಷ ವೆಬ್ಸೈಟ್ಗೆ ಚಾಲನೆ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕೇಂದ್ರ ಗ್ರಂಥಾಲಯದಲ್ಲಿ 100 ಆಸನಗಳ ಆಧುನಿಕ ತಂತ್ರಜ್ಞಾನ ಹೊಂದಿದ ‘ಜ್ಞಾನಸೇತು’ ತರಬೇತಿ ಕೇಂದ್ರ ಹಾಗೂ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಪಿಸಿರುವ ವಿಶೇಷ ವೆಬ್ಸೈಟ್ಗೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಚಾಲನೆ ನೀಡಿದರು.
ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರ 134ನೇ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತರಗತಿಗಳಲ್ಲಿ ವಿಷಯಜ್ಞಾನಕ್ಕೆ ಹೆಚ್ಚಿನ ಒತ್ತು ದೊರೆತರೆ, ಗ್ರಂಥಾಲಯಗಳಲ್ಲಿ ವಿವಿಧ ಕ್ಷೇತ್ರಗಳ ಅಪಾರ ಜ್ಞಾನಸಂಪತ್ತು ಲಭ್ಯವಿರುತ್ತದೆ. ವ್ಯಕ್ತಿತ್ವ ವಿಕಸನ, ಜ್ಞಾನವೃದ್ಧಿ, ಶೈಕ್ಷಣಿಕ ಉನ್ನತಿ ಹಾಗೂ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಗ್ರಂಥಾಲಯದ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಕುಲಪತಿ ಕರೆ ನೀಡಿದರು.
ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ–ಒಂದು ಚಂದಾದಾರಿಕೆ’ ಯೋಜನೆಯಡಿ 30ಕ್ಕೂ ಹೆಚ್ಚು ಪ್ರಕಾಶಕರ 13,000ಕ್ಕೂ ಅಧಿಕ ಅಂತರರಾಷ್ಟ್ರೀಯ ಜರ್ನಲ್ಗಳು ಲಭ್ಯವಿವೆ. ಇ-ಗ್ರಂಥಾಲಯ ಸಂಪನ್ಮೂಲಗಳು, ವೈ-ಫೈ ಸೌಲಭ್ಯ, ಟರ್ನಿಟಿನ್ ಕೃತಿಚೌರ್ಯ ಪತ್ತೆ ಸಾಧನ, ವ್ಯಾಕರಣ ಸುಧಾರಣಾ ಪರಿಕರಗಳು ಸೇರಿದಂತೆ ಹಲವು ಡಿಜಿಟಲ್ ಸೌಲಭ್ಯಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಜೀವವಿಜ್ಞಾನ ನಿಕಾಯದ ಡೀನ್ ಪ್ರೊ. ಎನ್. ಸತ್ಯನಾರಾಯಣ ಮಾತನಾಡಿ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರು ಗ್ರಂಥಾಲಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹನೀಯರು. ಅವರ ಜಯಂತಿಯ ಸಂದರ್ಭದಲ್ಲಿ 100 ಆಸನಗಳ ಆಧುನಿಕ ‘ಜ್ಞಾನಸೇತು’ ಕೇಂದ್ರ ಹಾಗೂ ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ ವಿಶೇಷ ವೆಬ್ಸೈಟ್ ಅನಾವರಣಗೊಳಿಸಿರುವುದು ಕೇವಲ ದಿನಾಚರಣೆಗೆ ಸೀಮಿತವಾಗದೆ, ರಂಗನಾಥರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕೇಂದ್ರ ಗ್ರಂಥಾಲಯದ ಮುಖ್ಯಸ್ಥ ಡಾ. ಪಿ.ಎಸ್. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಶೈಕ್ಷಣಿಕ ಜೀವನದ ಹೃದಯಭಾಗವೇ ಗ್ರಂಥಾಲಯ. ಗ್ರಂಥಾಲಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿರುವ ಕುಲಪತಿಗಳಿಗೆ ಅಭಿನಂದನೆ ಸಲ್ಲಿಸಿದರು. ‘ಜ್ಞಾನಸೇತು’ ತರಬೇತಿ ಕೇಂದ್ರ ಹಾಗೂ ನೂತನ ವೆಬ್ಸೈಟ್ನ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೋಪಸ್ ಸೂಚ್ಯಂಕದಲ್ಲಿ ಉನ್ನತ ಗುಣಮಟ್ಟದ ಅತಿ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶೇಷನಾಥ ಭೋಸಲೆ ಹಾಗೂ ಉನ್ನತ ಗುಣಮಟ್ಟದ ಸಂಶೋಧನಾ ಲೇಖನಗಳಿಗೆ ಅತಿ ಹೆಚ್ಚು ಉಲ್ಲೇಖಗಳನ್ನು ಪಡೆದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಸಂದೀಪ್ ಅವರನ್ನು ಅಭಿನಂದಿಸಲಾಯಿತು.
ಅದೇ ರೀತಿ ಗ್ರಂಥಾಲಯವನ್ನು ಅತ್ಯುತ್ತಮವಾಗಿ ಬಳಸಿಕೊಂಡ ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಶೈಲಜಾ ಎಸ್. ಕೋನೆಕ, ಶ್ರೀ ಅನೀಲರಾವ್ ಕಾಂಬಳೆ ಸೇರಿದಂತೆ ಅತಿ ಹೆಚ್ಚು ಗ್ರಂಥಾಲಯ ಬಳಕೆ ಮಾಡಿದ ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳನ್ನು ಗ್ರಂಥಾಲಯದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ರಾಜಕುಮಾರ ಕಲ್ಯಾಣಿ ನಿರೂಪಿಸಿದರು. ಪ್ರಕಾಶ್ ಎಸ್.ಎನ್. ವಂದನಾರ್ಪಣೆ ಸಲ್ಲಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.
ಈ ಸಂದರ್ಭದಲ್ಲಿ ಉಪ ಗ್ರಂಥಪಾಲಕರಾದ ಡಾ. ಸತೀಶ್ ತೋಟರ್, ಡಾ. ದೀಕ್ಷಿತ್, ಸಿಬ್ಬಂದಿಗಳಾದ ರಾಜೇಶ್ ದಾಸ್, ಬಸವರಾಜ ಯಾದವಾಡ, ನಿಂಗಣ್ಣ, ಸಾಗರ ಕಡಬೆ, ಸತೀಶ್ ಕುಮಾರ್, ಶಿವಕುಮಾರ್ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.