ಜಂತುಹುಳು ಮುಕ್ತ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆ, ಮಾತ್ರೆ ಸೇವನೆ ಅಗತ್ಯ: ಡಾ. ಶರಣಬಸಪ್ಪ
ವಿದ್ಯಾರ್ಥಿಗಳಲ್ಲಿ ಜಂತುಹುಳು ನಿವಾರಣೆ ಕುರಿತು ಜಾಗೃತಿ
ಕಲಬುರಗಿ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಕ್ಕಳನ್ನು ಜಂತುಹುಳಿನ ಬಾಧೆಯಿಂದ ಮುಕ್ತಗೊಳಿಸುವುದು ಅಗತ್ಯವಾಗಿದ್ದು, ನಿಯಮಿತವಾಗಿ ಜಂತುಹುಳು ನಿವಾರಕ ಮಾತ್ರೆ ಸೇವಿಸುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಂತುಹುಳಿನ ಬಾಧೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅಲ್ಬೆಂಡಜೋಲ್ ಮಾತ್ರೆ ಸೇವಿಸುವ ಮೂಲಕ ಇದನ್ನು ನಿಯಂತ್ರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಜಂತುಹುಳಿನ ಬಾಧೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಅಲ್ಬೆಂಡಜೋಲ್ ಮಾತ್ರೆ ಸೇವನೆಯ ಮಹತ್ವ ಹಾಗೂ ಕೈಗಳ ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಕರೆ ನೀಡಲಾಯಿತು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ್, ಜಿಲ್ಲಾ ಸಂಯೋಜಕ ಶಿವಕುಮಾರ್ ಕಾಂಬಳೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವನಗೌಡ, ಪ್ರಾಂಶುಪಾಲ ಜಾಗೀರ್ದಾರ್ ಸೇರಿದಂತೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.