ಯಾವುದೇ ಒಂದು ರಾಷ್ಟ್ರವು ಕೇವಲ ಭೌಗೋಳಿಕ ಗಡಿಗಳಿಂದಲೋ, ನಕ್ಷೆಯ ಮೇಲಿನ ಗೆರೆಗಳಿಂದಲೋ ಅಥವಾ ಕಲ್ಲು-ಮಣ್ಣುಗಳಿಂದಲೋ ನಿರ್ಮಾಣವಾಗುವುದಿಲ್ಲ. ಅದೊಂದು ಆಳವಾದ ಭಾವನಾತ್ಮಕ ಕಲ್ಪನೆ, ಕೋಟ್ಯಂತರ ಹೃದಯಗಳ ಸಾಮೂಹಿಕ ಮಿಡಿತ ಹಾಗೂ ಮೌನವಾದ ಒಪ್ಪಂದ. ಆ ಅದೃಶ್ಯ ಒಪ್ಪಂದಕ್ಕೆ, ಆ ಮಿಡಿತಕ್ಕೆ ಅಕ್ಷರ ರೂಪ ಕೊಟ್ಟಾಗ ಹುಟ್ಟುವ ಗೀತೆಗಳು ಕೇವಲ ಪದಗಳ ಜೋಡಣೆಯಾಗಿರದೆ, ಇತಿಹಾಸದ ನರನಾಡಿಯಾಗಿ ಪರಿಣಮಿಸುತ್ತವೆ. ಇತ್ತೀಚೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ Prevention of Insults to National Honour Amendment Bill 2026 ಇಂತಹದ್ದೇ ಒಂದು ಐತಿಹಾಸಿಕ ಹಾಗೂ ಭಾವನಾತ್ಮಕ ಅಸ್ಮಿತೆಗೆ ಶಾಸನಾತ್ಮಕ ಕವಚವನ್ನು ತೊಡಿಸಿದೆ. 1971ರ ಮೂಲ ಕಾಯ್ದೆಗೆ ಈ ತಿದ್ದುಪಡಿ ತರುವ ಮೂಲಕ, ರಾಷ್ಟ್ರಗೀತೆ ‘ಜನ ಗಣ ಮನ’ ಹಾಗೂ ರಾಷ್ಟ್ರಧ್ವಜಕ್ಕೆ ಇದ್ದ ಸಮಾನ ಶಾಸನಾತ್ಮಕ ರಕ್ಷಣೆಯನ್ನು ಇದೀಗ ‘ವಂದೇ ಮಾತರಂ’ National Song ವಿಸ್ತರಿಸಲಾಗಿದೆ.
ಒಮ್ಮೆ ಕಣ್ಣು ಮುಚ್ಚಿ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಬಂಗಾಳದ ಫಲವತ್ತಾದ ಮಣ್ಣಿನಲ್ಲಿ ಉದಯಿಸಿದ ಈ ಗೀತೆ, ಇಡೀ ಉಪಖಂಡದ ಉದ್ದಗಲಕ್ಕೂ ಸ್ವಾತಂತ್ರ್ಯದ ಕಿಚ್ಚನ್ನು ಹೇಗೆ ಹೊತ್ತಿಸಿತ್ತು ಎಂಬುದು ನಮ್ಮ ಕಣ್ಮುಂದೆ ಹಾದುಹೋಗುತ್ತದೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಂತಹ ತರುಣರು ನಗುನಗುತ್ತಾ ನೇಣಿನ ಕುಣಿಕೆಗೆ ಕೊರಳೊಡ್ಡುವಾಗ ಅವರ ತುಟಿಗಳಲ್ಲಿದ್ದ ಕೊನೆಯ ಮಂತ್ರ ಇದೇ ‘ವಂದೇ ಮಾತರಂ’. ಅದೊಂದು ಕೇವಲ ಹಾಡಾಗಿರಲಿಲ್ಲ, ಅದು ದಾಸ್ಯದ ಸಂಕೋಲೆಗಳನ್ನು ಮುರಿಯಲು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಅಭಿವ್ಯಕ್ತಿಯಾಗಿತ್ತು. 1950ರ ಜನವರಿ 24ರಂದು ಸಂವಿಧಾನ ರಚನಾ ಸಭೆಯು ಈ ಹಾಡಿಗೆ ರಾಷ್ಟ್ರಗೀತೆಯ ಸಮಾನ ಸ್ಥಾನಮಾನ ನೀಡಿದ್ದರೂ, ದಶಕಗಳ ಕಾಲ ಅದು ಒಂದು ಬಗೆಯ ಶಾಸನಾತ್ಮಕ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂಬುದು ವಾಸ್ತವ. 1971ರಲ್ಲಿ ರಾಷ್ಟ್ರೀಯ ಚಿಹ್ನೆಗಳಿಗೆ ರಕ್ಷಣೆ ನೀಡುವ ಕಾಯ್ದೆ ತಂದಾಗಲೂ ಈ ಗೀತೆಯನ್ನು ಕೈಬಿಡಲಾಗಿತ್ತು. ಇದೀಗ 75 ವರ್ಷಗಳ ನಂತರ, ಆ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಪ್ರಯತ್ನವಾಗಿ ಈ ತಿದ್ದುಪಡಿ ರೂಪುಗೊಂಡಿದೆ.
ಹೊಸ ಕಾನೂನಿನ ಅನ್ವಯ, ‘ವಂದೇ ಮಾತರಂ’ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಅವಮಾನಿಸುವುದು ಗರಿಷ್ಠ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾದ ಕ್ರಿಮಿನಲ್ ಅಪರಾಧವಾಗಿದೆ. ಇಲ್ಲಿ ತಾರ್ಕಿಕವಾಗಿ ಒಂದು ಪ್ರಶ್ನೆ ಏಳುವುದು ಸಹಜ: ದೇಶಭಕ್ತಿಯನ್ನು ಕಾನೂನಿನ ಚಾವಟಿಯಿಂದ ಬಡಿದು ಎಚ್ಚರಿಸಬೇಕೇ? ಗೌರವ ಎಂಬುದು ಅಂತಃಕರಣದಿಂದ, ಒಲವಿನಿಂದ ಮೂಡಬೇಕಾದ ಭಾವನೆಯಲ್ಲವೇ? ಖಂಡಿತ ಹೌದು. ಆದರೆ, ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದಾಗ, ಕಾನೂನು ಎಂಬುದು ಸಮಾಜದ ಪ್ರಜ್ಞಾವಂತರಿಗಾಗಿ ಅಥವಾ ಸಹಜ ದೇಶಭಕ್ತರಿಗಾಗಿ ಅಲ್ಲ; ಬದಲಿಗೆ, ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಕದಡುವ, ಸಾಂಕೇತಿಕ ಮೌಲ್ಯಗಳನ್ನು ಧಿಕ್ಕರಿಸುವ ವಿಕೃತ ಮನಸ್ಸುಗಳ ನಿಯಂತ್ರಣಕ್ಕಾಗಿ ಮಾತ್ರ ಅಸ್ತಿತ್ವದಲ್ಲಿರುತ್ತದೆ. ವರದಕ್ಷಿಣೆ ತಡೆ ಕಾಯ್ದೆಯು ಹೇಗೆ ಸಮಾಜದ ಎಲ್ಲರ ಮೇಲೂ ಪ್ರಯೋಗವಾಗದೆ ಕೇವಲ ಅಪರಾಧಿಗಳ ವಿರುದ್ಧ ಪ್ರಯೋಗವಾಗುತ್ತದೆಯೋ, ಅಂತೆಯೇ ಈ ಶಾಸನವೂ ಸಹ ರಾಷ್ಟ್ರೀಯ ಐಕ್ಯತೆಯನ್ನು ಛಿದ್ರಗೊಳಿಸಲು ಯತ್ನಿಸುವವರ ಪಾಲಿಗೆ ಮಾತ್ರ ಶಿಸ್ತಿನ ಅಸ್ತ್ರವಾಗಲಿದೆ.
ಸಂಸತ್ತಿನ ಕಲಾಪಗಳಲ್ಲಿ ಮತ್ತು ಹೊರಗಡೆ ಈ ಮಸೂದೆ ಸಹಜವಾಗಿಯೇ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಇದನ್ನು ಕಡ್ಡಾಯಗೊಳಿಸುವುದು ಒಕ್ಕೂಟ ವ್ಯವಸ್ಥೆ ಹಾಗೂ ಜಾತ್ಯತೀತ ತತ್ತ್ವಗಳಿಗೆ ಧಕ್ಕೆ ತರುತ್ತದೆ ಎಂಬುದು ಕೆಲವು ಪ್ರತಿಪಕ್ಷಗಳ ಆತಂಕ. ಆದರೆ, ಈ ಗೀತೆಯ ಸಾಹಿತ್ಯವನ್ನು ಆಳವಾಗಿ ವಿಶ್ಲೇಷಿಸಿದರೆ ಅದರಲ್ಲಿ ನಮಗೆ ಕಾಣುವುದು ಶುದ್ಧವಾದ ನಿಸರ್ಗ ಪ್ರೇಮ ಮತ್ತು ಮಾತೃಭೂಮಿಯ ಧ್ಯಾನ. ಶುದ್ಧ ಜಲ, ಮಧುರವಾದ ಹಣ್ಣುಗಳು, ಶ್ಯಾಮಲ ವರ್ಣದ ಪೈರುಗಳು, ಪ್ರಕೃತಿಯ ಸೊಬಗು – ಇವುಗಳನ್ನು ಆರಾಧಿಸುವುದು ಯಾವುದೇ ಒಂದು ಧರ್ಮದ ಗುತ್ತಿಗೆಯಲ್ಲ. ಭಾರತೀಯ ಭೌಗೋಳಿಕತೆಯು ಬದುಕಿನ ಒಂದು ಅವಿಭಾಜ್ಯ ಅಂಗವೆಂದು ಸಾರುವ ಕಾವ್ಯವಿದು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ ಹಾಗೂ ಸ್ವಾಗತಾರ್ಹ. ಆದರೆ, ರಾಜ್ಯಗಳ ಗಡಿಗಳು ಬದಲಾಗಬಹುದು, ಹೊಸ ರಾಜ್ಯಗಳು ಸೃಷ್ಟಿಯಾಗಬಹುದು; ದೇಶವನ್ನೇ ಒಡೆದು ಮತ್ತೊಂದು ದೇಶವನ್ನು ಸೃಷ್ಟಿಸಲು ಸಾಧ್ಯವಿಲ್ಲವಲ್ಲವೇ? ಒಮ್ಮೆ ಒಂದು ಶಾಸನವು ಬಹುಮತದ ಸಂವಿಧಾನಾತ್ಮಕ ಪ್ರಕ್ರಿಯೆಯ ಮೂಲಕ ಅಂಗೀಕಾರಗೊಂಡ ಮೇಲೆ, ಅದನ್ನು ಒಪ್ಪಿಕೊಳ್ಳುವುದು ಪ್ರಜಾಸತ್ತಾತ್ಮಕ ಮೌಲ್ಯವೂ ಹೌದು.
ಕಾನೂನಿನ ಜಾರಿಯಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಮಹತ್ವದ ಪದವೆಂದರೆ ‘ಉದ್ದೇಶಪೂರ್ವಕ’. ನ್ಯಾಯಾಲಯದ ಕಟ್ಟೆ ಏರಿದಾಗ, ಉದ್ದೇಶಪೂರ್ವಕ ಅಗೌರವ ಮತ್ತು ಅನಿವಾರ್ಯ ಅಸಾಮರ್ಥ್ಯಗಳ ನಡುವಿನ ವ್ಯತ್ಯಾಸವನ್ನು ಕಾನೂನು ವಿವೇಚನೆಯಿಂದ ನೋಡಬೇಕಾಗುತ್ತದೆ. ವಯೋಸಹಜ ಕಾಯಿಲೆಯಿಂದಲೋ ಅಥವಾ ದೈಹಿಕ ನ್ಯೂನತೆಯಿಂದಲೋ ಎದ್ದು ನಿಲ್ಲಲಾಗದ ವ್ಯಕ್ತಿಯೊಬ್ಬನ ಅಸಾಮರ್ಥ್ಯವು ಎಂದಿಗೂ ಅಪರಾಧವಾಗಲಾರದು; ಏಕೆಂದರೆ ಅಲ್ಲಿ ‘ಉದ್ದೇಶ’ವಿಲ್ಲ. ಆದರೆ, ಕಾನೂನಿನ ಅರಿವಿದ್ದೂ, ಕೇವಲ ಪ್ರಚೋದನೆಯ ಉದ್ದೇಶದಿಂದ ಸಭೆಗೆ ಅಡ್ಡಿಪಡಿಸುವ ಅಥವಾ ಗೀತೆಯನ್ನು ಅವಮಾನಿಸುವ ಕ್ರಿಯೆ ಖಂಡಿತವಾಗಿಯೂ ಶಿಕ್ಷಾರ್ಹ. ಈ ಸೂಕ್ಷ್ಮತೆಯನ್ನು ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಅಷ್ಟೇ ಪಕ್ವತೆಯಿಂದ ನಿಭಾಯಿಸಬೇಕಿದೆ.
ಅಂತಿಮವಾಗಿ, ಕೇವಲ ಶಾಸನದ ಭಯದಿಂದ ದೇಶಭಕ್ತಿಯನ್ನು ಬಿತ್ತಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕು. ಶಾಸನಗಳು ಕೇವಲ ಒಂದು ರಕ್ಷಣಾತ್ಮಕ ಚೌಕಟ್ಟನ್ನು ಒದಗಿಸಬಲ್ಲವು ಅಷ್ಟೇ. ರಾಷ್ಟ್ರೀಯ ಚಿಹ್ನೆಗಳ ಬಗ್ಗೆ, ನಮ್ಮ ಭವ್ಯ ಇತಿಹಾಸದ ಬಗ್ಗೆ ನಿಜವಾದ ಗೌರವ ಮತ್ತು ಪ್ರೀತಿಯನ್ನು ಮೂಡಿಸುವ ಹೊಣೆಗಾರಿಕೆ ಇರುವುದು ನಮ್ಮ ಸಮಾಜದ ಮೇಲೆ, ಕುಟುಂಬಗಳ ಮೇಲೆ, ಶಿಕ್ಷಣ ವ್ಯವಸ್ಥೆ ಹಾಗೂ ಕಲೆ-ಸಿನಿಮಾಗಳ ಮೇಲೆ. ನಮ್ಮ ಮುಂದಿನ ಪೀಳಿಗೆಗೆ ‘ವಂದೇ ಮಾತರಂ’ ಕೇವಲ ಒಂದು ದಂಡನೀಯ ಕಾಯ್ದೆಯ ವಿಷಯವಾಗಿ ಅಥವಾ ಪರೀಕ್ಷೆಯ ಪ್ರಶ್ನೆಯಾಗಿ ಪರಿಚಯವಾಗಬಾರದು; ಬದಲಿಗೆ, ಅದು ಲಕ್ಷಾಂತರ ಸ್ವಾತಂತ್ರ್ಯ ಯೋಧರ ರಕ್ತದಿಂದ ಬರೆದ ತ್ಯಾಗದ ಕಾವ್ಯವಾಗಿ, ಸ್ವಾಭಿಮಾನದ ಸಂಕೇತವಾಗಿ ಪರಿಚಯವಾಗಬೇಕು.
ರಾಷ್ಟ್ರೀಯತೆಯೆಂಬುದು ಒಂದು ನಿರಂತರವಾಗಿ ಹರಿಯುವ ನದಿ; ಅದು ಕಾಲಕಾಲಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗಬೇಕು. ‘ವಂದೇ ಮಾತರಂ’ಗೆ ಶಾಸನಾತ್ಮಕ ಮನ್ನಣೆ ನೀಡಿರುವುದು ಆ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ಒಂದು ಮಹತ್ವದ ಹೆಜ್ಜೆ. ಪ್ರಜ್ಞಾವಂತ ಓದುಗರಾದ ನಾವು, ಕೇವಲ ರಾಜಕೀಯ ಅಥವಾ ಕಾನೂನಿನ ಒಣ ತರ್ಕಗಳನ್ನು ಮೀರಿದ ಒಂದು ವಿಶಾಲವಾದ, ಸಾಂಸ್ಕೃತಿಕ ದೃಷ್ಟಿಕೋನದಿಂದ ಈ ಬೆಳವಣಿಗೆಯನ್ನು ನೋಡಬೇಕಿದೆ. ಮಾತೃಭೂಮಿಯ ಮೇಲಿನ ಪ್ರೇಮವು ಕೇವಲ ಕಟ್ಟುಪಾಡುಗಳಿಗೆ ಸೀಮಿತವಾಗದೆ, ನಮ್ಮೆಲ್ಲರ ಸಹಜ, ಶುದ್ಧ ಹಾಗೂ ಸ್ವಯಂಪ್ರೇರಿತ ಅಭಿವ್ಯಕ್ತಿಯಾಗಲಿ.
ಶಿವರಾಜ ಸೂ. ಸಣಮನಿ, ಮದಗುಣಕಿ