Shubhashaya News

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಇಕ್ರಮ್ ಶರೀಫ್

ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ – ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಕಲಬುರಗಿ: ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ, ವಸತಿ ಯೋಜನೆಗಳು ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್
ಶರೀಫ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಕೇವಲ ಭೌತಿಕ ಪ್ರಗತಿ ವರದಿ ನೀಡುವುದಕ್ಕೆ ಸೀಮಿತವಾಗದೆ, ಬಜೆಟ್ ಅನುದಾನದ ಸಮರ್ಪಕ ಬಳಕೆ, ಶಿಕ್ಷಣದ ಗುಣಮಟ್ಟ ಸುಧಾರಣೆ ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ವಿಸ್ತೃತ ಚರ್ಚೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳ ಪರಿಶೀಲನೆ ಮೂಲಕ ಪರಿಹರಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಉರ್ದು ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಹಿನ್ನಡೆ ಹಾಗೂ ಶಾಲೆ ತೊರೆಯುವ ಪ್ರಮಾಣವನ್ನು ತಡೆಯಲು ಆರಂಭಿಕ ಹಂತದಿಂದಲೇ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಬೋಧನೆಗೆ ಒತ್ತು ನೀಡಬೇಕು ಎಂದರು. ಈ ನಿಟ್ಟಿನಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ ಗಣಿತ, ವಿಜ್ಞಾನ ಹಾಗೂ ಭಾಷಾ ಶಿಕ್ಷಕರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಮದರಸಾಗಳನ್ನು ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೌಲಾನಾ ಆಜಾದ್, ಮೊರಾರ್ಜಿ ದೇಸಾಯಿ ಹಾಗೂ ಉರ್ದು ಶಾಲೆಗಳ ಫಲಿತಾಂಶ, ಶಿಕ್ಷಕರ ಕೊರತೆ ಹಾಗೂ ಅಗತ್ಯಗಳ ಕುರಿತು ಪವರ್‌ಪಾಯಿಂಟ್ ವರದಿ ಸಿದ್ಧಪಡಿಸುವಂತೆ ನಿರ್ದೇಶಿಸಿದರು.

ಖಾಸಗಿ ಶಾಲೆಗಳು ಪೋಷಕರಿಗೆ ನಿರ್ದಿಷ್ಟ ಅಂಗಡಿಗಳಿಂದಲೇ ಪುಸ್ತಕ ಮತ್ತು ಶಾಲಾ ಬ್ಯಾಗ್ ಖರೀದಿಸಲು ಒತ್ತಾಯಿಸಿದರೆ ಅಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಜೂರಾಗಿರುವ ಬಾಲಕಿಯರ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ವಕ್ಫ್ ಮಂಡಳಿ ಅಥವಾ ಲಭ್ಯವಿರುವ ಸರ್ಕಾರಿ ಜಾಗವನ್ನು ತ್ವರಿತವಾಗಿ ಗುರುತಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದರ ಜೊತೆಗೆ, ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಿಯಮಿತವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಶಾಲಾ ಹೆಣ್ಣುಮಕ್ಕಳಿಗೆ ಶೌಚಾಲಯ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಅನುದಾನ ಬಳಸಿಕೊಳ್ಳುವಂತೆ ಸೂಚಿಸಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಮೌಲಾನಾ ಆಜಾದ್ ಶಾಲೆಗಳ ಶಿಕ್ಷಕರು ಭಾನುವಾರ ಸೇರಿದಂತೆ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ ಸೂಚಿಸಿದ ಅವರು, ಅರ್ಹ ವಿದ್ಯಾರ್ಥಿಗಳಿಗೆ ಪ್ರೀ-ಮೆಟ್ರಿಕ್ ಹಾಗೂ ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನವನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ 72 ಸಾವಿರ ಮನೆಗಳಲ್ಲಿ ಈಗಾಗಲೇ 37,362 ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುವಂತೆ ಸೂಚಿಸಿದರು. ಸರ್ಕಾರದ ಯೋಜನೆಗಳ ಮಾಹಿತಿ ಪ್ರಚಾರ ವಾಹನಗಳು, ಜಿಂಗಲ್ಸ್ ಹಾಗೂ ಮಾಧ್ಯಮಗಳ ಮೂಲಕ ಗ್ರಾಮೀಣ ಮಟ್ಟದ ಜನರಿಗೆ ತಲುಪುವಂತೆ ಪರಿಣಾಮಕಾರಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯರು ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು. ಡೇ-ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸುವುದು ಹಾಗೂ ಕ್ರಿಶ್ಚಿಯನ್, ಜೈನ್, ಸಿಖ್ ಮತ್ತು ಮುಸ್ಲಿಂ ಸಮುದಾಯಗಳ ಪ್ರಾರ್ಥನಾ ಮಂದಿರಗಳು, ಚರ್ಚ್‌ಗಳ ನವೀಕರಣ ಮತ್ತು ಸಮುದಾಯ ಭವನಗಳಿಗೆ ಸಂಬಂಧಿಸಿದ ಬಾಕಿ ಪ್ರಸ್ತಾವನೆಗಳನ್ನು ಶೀಘ್ರ ಸಲ್ಲಿಸುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಎಸಿಪಿ ಪ್ರವೀಣ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಪಂಚಾಯತ್ ಪ್ರಭಾರ ಮುಖ್ಯ ಯೋಜನಾಧಿಕಾರಿ ಮಧುಮತಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹಜರತ್ ಅಲಿ, ವಕ್ಫ್ ಅಧಿಕಾರಿ ಪರವೇಜ್ ಅಲಿ, ಜಿಲ್ಲಾ ಕೈಗಾರಿಕಾ ಸಹಾಯಕ ಜಾಫರ್ ಅನ್ಸಾರಿ, ಮಸ್ತಾನ್ ಪಟೇಲ್, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.