ಆಳಂದ: ಪಟ್ಟಣದಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಅವರು ಪಕ್ಷಕ್ಕೆ ಸೇರ್ಪಡೆಯಾದ ರಫಿಕ್ ಇನಾಮದಾರ ಅವರನ್ನು ಸನ್ಮಾನಿಸಿ ಸ್ವಾಗತಿಸಿಕೊಂಡರು.
ಆಳAದ: ಆಳಂದದ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಪರಿಗಣಿಸಲ್ಪಡುವ ಘಟನೆಯಲ್ಲಿ ಪ್ರಭಾವಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ರಫೀಕ್ ಇನಾಮದಾರ ಅವರು ಅಧಿಕೃತವಾಗಿ ಜನತಾ ದಳ (ಜಾತ್ಯತೀತ) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದುವರೆಗೆ ವಿವಿಧ ಚುನಾವಣೆಗಳಲ್ಲಿ ತೆರೆಮರೆಯಲ್ಲೇ ಹಲವು ಪಕ್ಷ, ಮುಖಂಡರುಗಳಿಗೆ ರಾಜಕೀಯ ಬೆಂಬಲ ನೀಡುತ್ತಿದ್ದ ಇನಾಮದಾರ ಅವರು ಇದೀಗ ನೇರವಾಗಿ ಜೆಡಿಎಸ್ ಧ್ವಜದಡಿ ರಾಜಕೀಯ ಪಯಣ ಆರಂಭಿಸಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ಸಂಚಲನ ಮೂಡಿಸಿದೆ ಅಲ್ಲದೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಟ್ಟಣದಲ್ಲಿರುವ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಶಾಲು ಹೊದಿಸಿ ರಫೀಕ್ ಇನಾಮದಾರ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಸೇರ್ಪಡೆ ಬಳಿಕ ಮಾತನಾಡಿದ ರಫೀಕ್ ಇನಾಮದಾರ, “ಜೆಡಿಎಸ್ನ ರೈತಪರ, ಬಡಜನಪರ ಹಾಗೂ ಸಾಮಾಜಿಕ ನ್ಯಾಯದ ತತ್ವ-ಸಿದ್ಧಾಂತಗಳು ನನ್ನನ್ನು ಆಕರ್ಷಿಸಿವೆ. ಅಧಿಕಾರಕ್ಕಾಗಿ ಅಲ್ಲ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ೨೦೨೮ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ರೈತರು, ಯುವಕರು, ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗದ ಜನರನ್ನು ಸಂಘಟಿಸಿ ಆಳಂದ ಕ್ಷೇತ್ರದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಸಂಕಲ್ಪ ಹೊಂದಿದ್ದೇನೆ. ಕಳೆದ ನಾಲ್ಕು ದಶಕಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊAಡಿದ್ದು, ಜನರ ನಿರೀಕ್ಷೆಗೆ ತಕ್ಕ ಆಡಳಿತ ದೊರಕಿಲ್ಲ. ಮಹೇಶ್ವರಿ ವಾಲಿ ಅವರ ನೇತೃತ್ವದಲ್ಲಿ ಗ್ರಾಮ ಮಟ್ಟದಿಂದ ಪಕ್ಷವನ್ನು ಬಲಪಡಿಸಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ” ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿ, “ಜನರ ಪರ ಧ್ವನಿ ಎತ್ತುವ, ಸಮಾಜದ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಡುವ ವ್ಯಕ್ತಿತ್ವಗಳು ಜೆಡಿಎಸ್ಗೆ ಸೇರ್ಪಡೆಯಾಗುತ್ತಿರುವುದು ಪಕ್ಷದ ಬೆಳವಣಿಗೆಗೆ ಶುಭ ಸೂಚನೆಯಾಗಿದೆ. ರಫೀಕ್ ಇನಾಮದಾರ ಅವರಂತಹ ಪ್ರಭಾವಿ ನಾಯಕರು ಪಕ್ಷಕ್ಕೆ ಬಂದಿರುವುದು ಆಳಂದದಲ್ಲಿ ಜೆಡಿಎಸ್ಗೆ ಹೊಸ ಶಕ್ತಿ ತುಂಬಲಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನರ ಆಶಯಗಳಿಗೆ ಸ್ಪಂದಿಸುವ ಬಲಿಷ್ಠ ಸಂಘಟನೆ ನಿರ್ಮಿಸಿ, ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಪರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ರಾಜಕೀಯ ಸಂಸ್ಕೃತಿಗೆ ಪ್ರಜಾಪ್ರಭುತ್ವದ ಮೂಲಕ ಉತ್ತರ ನೀಡುವ ಸಮಯ ಬಂದಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮನಗರದ ಯುವ ಮುಖಂಡ ಸೂರ್ಯಕಾಂತ ಬಿ. ಚಿಟಕೋಟಿ ಕೂಡ ಜೆಡಿಎಸ್ಗೆ ಸೇರ್ಪಡೆಯಾದರು. ಅವರನ್ನು ಸಹ ಮಹೇಶ್ವರಿ ವಾಲಿ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಸೈಯದ್ ಜಾಕೀರ್ ಅಹ್ಮದ್, ಶಿವುಕುಮಾರ ಪಡಸಾವಳಿ, ವಿಕ್ರಂ ಅಷ್ಟಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.